“ಲವ್ ಮಾಡು, ಲವ್ ಮಾಡು” ಎಂದು ಕಿರುಕುಳ: ಜಾಮೀನಿನ ಮೇಲೆ ಹೊರಬಂದ ರಂಗನಿಂದ ಯುವತಿ ಕುಟುಂಬಕ್ಕೂ ಬೆದರಿಕೆ; ನಂತರ ಲಾಂಗ್ ತೋರಿಸಿ ಕಿಡ್ನಾಪ್

ಬೆಂಗಳೂರು: ಬೆಂಗಳೂರಿನಲ್ಲಿ ಸಿನಿಮಾವನ್ನು ಮೀರಿಸುವಂತಹ ಲವ್ & ಕಿಡ್ನಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಪ್ರೀತಿಸುತ್ತಿದ್ದ ಯುವತಿ ಮದುವೆಗೆ ನಿರಾಕರಿಸಿದ್ದಳು ಎಂದು ಮೆಕ್ಯಾನಿಕ್ ರಂಗ ಕಿಡ್ನಾಪ್ ಮಾಡಿದ್ದಾನೆ. ರಂಗನ ಕ್ರಿಮಿನಲ್ ಹಿನ್ನೆಲೆ ಮತ್ತು ಕೊಲೆ ಪ್ರಕರಣಗಳು ತಿಳಿದು ಯುವತಿ ಆತನ ಸಂಪರ್ಕದಿಂದ ದೂರು ಹೋಗಿದ್ದಾಳೆ. ಮೆಕ್ಯಾನಿಕ್ ರಂಗ ಮತ್ತು ಯುವತಿ ಸುಮಾರು ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ರಂಗ ವೀಲಿಂಗ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ, ಈ ವೇಳೆ ಯುವತಿ ಇನ್ಸ್ಟಾದಲ್ಲಿ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ನಂತರ ರಂಗ ಯುವತಿಗೆ ಮದುವೆಯ ಪ್ರಪೋಸಲ್ ಸಹ ಇಟ್ಟಿದ್ದನು. ಆದರೆ, 2024ರ ಫೆಬ್ರವರಿಯಲ್ಲಿ ರಂಗ ತನ್ನ ಸ್ನೇಹಿತ ಚೇತನ್‌ಗಾಗಿ ಭದ್ರ ಎಂಬಾತನನ್ನು ಕೊಲೆ ಮಾಡಿದ್ದನು. ಈ ವಿಚಾರವಾಗಿ ಬ್ಯಾಟರಾಯನಪುರ ಪೊಲೀಸರು ದೂರು ದಾಖಲಿಸಿಕೊಂಡ, ರಂಗನನ್ನು ಬಂಧಿಸಿದರು.

ರಂಗ ಜೈಲುಪಾಲಾಗಿರುವ ವಿಷಯ ತಿಳಿದು ಯುವತಿಗೆ ಆಘಾತಕ್ಕೆ ಒಳಗಾಗಿದ್ದಳು, ರಂಗನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಅರಿತ ಯುವತಿ, ಆತನೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲ ಎಂದು ತಿಳಿದು, ಆತ ಜೈಲು ಸೇರುತ್ತಿದ್ದಂತೆ, ಯುವತಿ ಆತನಿಂದ ದೂರು ಹೋಗಲು ಮುಂದಾಗಿದ್ದಾಳೆ. ಯುವತಿ ರಂಗನ ಮೊಬೈಲ್ ನಂಬರ್, ಸೋಶಿಯಲ್ ಮೀಡಿಯಾ ಸಂಪರ್ಕ ಸೇರಿದಂತೆ ಎಲ್ಲವನ್ನೂ ಬ್ಲಾಕ್ ಮಾಡಿ, ತನ್ನ ಇನ್‌ಸ್ಟಾಗ್ರಾಂ ಖಾತೆಯನ್ನೂ ಡಿಲೀಟ್ ಮಾಡಿದ್ದಳು. ಯುವತಿ ತಾನು ನಿನ್ನ ಜತೆಗೆ ಸಂಬಂಧ ಬೆಳೆಸಲು ಸಾಧ್ಯವಿಲ್ಲ ಎಂದು ರಂಗನಿಗೆ ನೇರವಾಗಿ ತಿಳಿಸಿದ್ದಾಳೆ. ನಂತರ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ರಂಗ, ಮದುವೆಯಾಗುವಂತೆ ಯುವತಿಗೆ ಕಿರುಕುಳ ನೀಡಿದ್ದಾನೆ. ಪ್ರತಿದಿನ ಲವ್ ಮಾಡು, ಲವ್ ಮಾಡು ಎಂದು ಆಕೆಗೆ ಮಾನಸಿಕ ಕಿರುಕುಳ ನೀಡಿದ್ದ ಎಂದು ಹೇಳಲಾಗಿದೆ. ಆದರೆ ಯುವತಿ ಆತನ ಯಾವುದೇ ಮಾತಿಗೂ ಒಪ್ಪಿಲ್ಲ, ಅದರೂ ರಂಗ ಆಕೆಯ ಬೆನ್ನು ಬಿಡದೆ ಕಾಲೇಜಿನ ಬಳಿ ಹೋಗಿ ಫಾಲೋ ಮಾಡುತ್ತಿದ್ದನು.
ಯುವತಿ ಕುಟುಂಬಕ್ಕೂ ಕಿರುಕುಳ ನೀಡಿದ್ದನು. ಈ ಯಾವ ಬೆದರಿಕೆಗೂ ಯುವತಿ ಜಗ್ಗದಿದ್ದಾಗ, ರಂಗ ತನ್ನ ಸ್ನೇಹಿತರೊಂದಿಗೆ ಸೇರಿ ಪ್ರಿಯತಮೆಯ ಮನೆಗೆ ನುಗ್ಗಿ ಪ್ರಿಯತಮೆಯ ತಾಯಿಯ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಲು ಯತ್ನಿಸಿದ್ದ, ನಂತರ ಸಿನಿಮೀಯ ರೀತಿಯಲ್ಲಿ ನಡುರಸ್ತೆಯಲ್ಲೇ ಯುವತಿಯ ಕುತ್ತಿಗೆಗೆ ಚಾಕು ಇಟ್ಟು, ಲಾಂಗ್ ತೋರಿಸಿ ಕಿಡ್ನಾಪ್ ಮಾಡಿದ್ದಾನೆ. ಈ ಘಟನೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಕಾರ್ಯಾಚರಣೆ ನಡೆಸಿದ್ದಾರೆ. ಕೃತ್ಯ ನಡೆದ ಕೇವಲ 12 ಗಂಟೆಗಳ ಒಳಗೇ ಆರೋಪಿ ರಂಗ ಮತ್ತು ಆತನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.