ಘೋರ ಕ್ರೌರ್ಯ: ರಸ್ತೆ ಬದಿಯಲ್ಲಿ ಮಲಗಿದ್ದ ಗರ್ಭಿಣಿ ಬೀದಿನಾಯಿ ಮೇಲೆ ಟಾಟಾ ಏಸ್ ಹರಿಸಿ ಕೊಂದ ಚಾಲಕ; ಹೊಟ್ಟೆಯಲ್ಲಿ 8 ಮರಿಗಳು ಪತ್ತೆ!

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಇಂಡ್ಲಬೆಲೆ ಎನ್.ವಿ.ಟಿ ಮೆಜೆಸ್ಟಿಕ್ ಗಾರ್ಡನ್ ಮುಂಭಾಗದಲ್ಲಿ ರಸ್ತೆ ಬದಿ ಮಲಗಿದ್ದ ಬೀದಿನಾಯಿ ಮೇಲೆ ಟಾಟಾ ಏಸ್ ಹರಿಸಿ ಕ್ರೌರ್ಯ ಮೆರೆದಿದ್ದಾರೆ. ಕಳೆದ ತಿಂಗಳು 20 ನೇ ತಾರೀಖು ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಗರ್ಭಿಣಿ ನಾಯಿ ವಿಲ ವಿಲ ಅಂತ ಒದ್ದಾಡಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿಯ ಹೊಟ್ಟೆಯಲ್ಲಿ 8 ಮರಿಗಳಿರುವುದು ಪತ್ತೆಯಾಗಿದ್ದು, ಪ್ರಾಣಿ ಪ್ರಿಯೆ ಶ್ವೇತಾ ಸಿಂಗ್ ರಿಂದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರು ನೀಡಿದ್ದರೂ ಚಾಲಕನ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
