ಕೈಗೆಟುಕುವ ದರದಲ್ಲಿ ಇವಿಗಳು ಲಭ್ಯ: ನಾಲ್ಕರಿಂದ ಆರು ತಿಂಗಳಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಸಮವಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬೆಲೆ

ಗುಡ್ ನ್ಯೂಸ್ ಕೊಟ್ಟ ನಿತಿನ್ ಗಡ್ಕರಿ, 6 ತಿಂಗಳಲ್ಲಿ ಪೆಟ್ರೋಲ್ ವಾಹನ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವೆಹಿಕಲ್, ಈಗಾಗಲೇ ಜಿಎಸ್‌ಟಿ ಕಡಿತದಿಂದ ವಾಹನ ಬೆಲೆ ಬಾರಿ ಇಳಿಕೆಯಾಗಿದೆ. ಇದೀಗ ಎಲೆಕ್ಟ್ರಿಕ್ ವಾಹನ ಬೆಲೆ ಇನ್ನೋ ಪೆಟ್ರೋಲ್ ವಾಹನ ಬೆಲೆಯಲ್ಲೇ ಲಭ್ಯವಾಗುತ್ತಿದೆ.
ನವದೆಹಲಿ (ಅ.07) ಜಿಎಸ್‌ಟಿ ಕಡಿತದಿಂದ ವಾಹನ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಹೀಗಾಗಿ ಹಬ್ಬದ ಸೀಸನ್‌ನಲ್ಲಿ ವಾಹನ ಖರೀದಿ ಭಾರಿ ಹೆಚ್ಚಳವಾಗಿದೆ. ಇತ್ತ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿಲ್ಲ. ಇಳಿಕೆಯಾದರೂ ಪೆಟ್ರೋಲ್, ಡೀಸೆಲ್ ವಾಹನ ರೀತಿಯಲ್ಲಿ ಎಲೆಕ್ಟ್ರಿಕ್ ವಾಹನ ಸಿಗುತ್ತಿಲ್ಲ. ಇದೀಗ ಎಲೆಕ್ಟ್ರಿಕ್ ವಾಹನ ಖರೀದಿಸಲು ಹಿಂದೇಟು ಹಾಕಬೇಕಾಗಿಲ್ಲ. ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ಪೆಟ್ರೋಲ್-ಡೀಸೆಲ್ ಬೆಲೆಗೆ ಸಮವಾಗಲಿದೆ. ಎಲೆಕ್ಟ್ರಿಕ್ ವಾಹನ ಬೆಲೆಯಲ್ಲಿ ಭಾರಿ ಇಳಿಕೆ ಕೆಲವೇ ತಿಂಗಳಲ್ಲಿ ಆಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನ
ಎಫ್‌ಐಸಿಸಿಐ ಹೈಯರ್ ಎಜುಕೇಶನ್ ಸಮ್ಮಿಟ್ 2025ರ ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಭಾರತದ ಮೇಲೆ ಆರ್ಥಿಕ ಹೊರೆ ಹಾಗೂ ಪರಿಸರಕ್ಕೆ ಆಗುತ್ತಿರುವ ಹಾನಿ ತಪ್ಪಿಸುವ ಒತ್ತಡ ಹಾಗೂ ಅನಿವಾರ್ಯತೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ ಇದೀಗ ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ಆದ್ಯತೆ ನೀಡಲಾಗುತ್ತದೆ. ಭಾರತದಲ್ಲಿ ಎಲೆಕ್ಟ್ರಕ್ ವಾಹನ ಬಳಕೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನು, ಚಾರ್ಜಿಂಗ್ ಸ್ಟೇಶನ್ ಹೆಚ್ಚಳ ಮಾಡಲಾಗುತ್ತಿದೆ. ಇನ್ನು ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳಿಗೆ ಸಮವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
22 ಲಕ್ಷ ಕೋಟಿಗೆ ಹಿಗ್ಗಿದ ಭಾರತ ಆಟೋಮೊಬೈಲ್
ಭಾರತವನ್ನು ನಂಬರ್ 1 ಆಟೋಮೊಬೈಲ್ ಕ್ಷೇತ್ರವನ್ನಾಗಿ ಮಾಡುವು ಗುರಿ ಇಟ್ಟುಕೊಂಡಿದ್ದೇವೆ. 5 ವರ್ಷದಲ್ಲಿ ಭಾರತ ಆಟೋಮೊಬೈಲ್ ನಂ.1 ಆಗಲಿದೆ ಎಂದು ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ. ನಿಧಾನವಾಗಿ ಬೆಳವಣಿಗೆ ಕಾಣುತ್ತಿದ್ದ ಭಾರತದ ಆಟೋಮೊಬೈಲ್ ಕ್ಷೇತ್ರ ಇದೀಗ ವೇಗವಾಗಿ ಬೆಳೆಯುತ್ತಿದೆ. ನಾನು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡಾಗ 14 ಲಕ್ಷ ಕೋಟಿ ಇದ್ದ ಆಟೋಮೊಬೈಲ್ ಕ್ಷೇತ್ರ ಇದೀಗ 22 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಭಾರತಕ್ಕೆ ಮೂರನೇ ಸ್ಥಾನ
ವಿಶ್ವದ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದ ಆಟೋಮೊಬೈಲ್ ಕ್ಷೇತ್ರ 22 ಲಕ್ಷ ಕೋಟಿ ರೂಪಾಯಿ ಆಗಿದ್ದರೆ, ಮೊದಲ ಸ್ಥಾನದಲ್ಲಿರುವ ಅಮೆರಿಕ 78 ಲಕ್ಷ ಕೋಟಿ ರೂಪಾಯಿ ಗಾತ್ರವಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಚೀನಾ ಆಟೋಮೊಬೈಲ್ ಕ್ಷೇತ್ರದ ಗಾತ್ರ 47 ಲಕ್ಷ ಕೋಟಿ ರೂಪಾಯಿ.
ರೈತರಿಗೂ ಭರ್ಜರಿ ಆದಾಯ-ಗಡ್ಕರಿ
ಆಟೋಮೊಬೈಲ್ ಕ್ಷೇತ್ರದಲ್ಲಿನ ಮಹತ್ತರ ಬದಲಾವಣೆ ಹಲವು ಇತರ ಕ್ಷೇತ್ರಗಳಿಗೆ ನೆರವಾಗುತ್ತಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಸೇರಿಸುವ ಮಹತ್ತರ ಯೋಜನೆಯಿಂದ ರೈತರು ವಾರ್ಷಿಕವಾಗಿ 45,000 ಕೋಟಿ ರೂಪಾಯಿ ಆದಾಯಪಡೆಯುತ್ತಿದ್ದಾರೆ. ತಾಜ್ಯವನ್ನು ಸದುಪಯೋಗಪಡಿಸಿಕೊಂಡು ಅದರಲ್ಲಿ ಉತ್ಪಾದನೆ ಮಾಡುತ್ತಿದ್ದೇವೆ. ಆರಂಭಿಕ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ ಹಾಗೂ ಆದಾಯವೂ ಲಭ್ಯವಾಗುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಜಿಎಸ್‌ಟಿ ಕಡಿತದಿಂದ ವಾಹನ ಮಾರಾಟದಲ್ಲಿ ದಾಖಲೆ
ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ನೀತಿ ಜಾರಿಗೊಳಿಸಿದ ಬೆನ್ನಲ್ಲೇ ಆಟೋ ಮೊಬೈಲ್ ಕ್ಷೇತ್ರದಲ್ಲಿ ದಾಖಲೆಯ ಮಾರಾಟವಾಗಿದೆ. ಕಾರುಗಳ ಬೆಲೆಯಲ್ಲಿ ಲಕ್ಷ ಲಕ್ಷ ರೂಪಾಯಿ ಇಳಿಕೆಯಾಗಿದೆ. ಭಾರಿ ಇಳಿಕೆಯಿಂದ ಜನಸಾಮಾನ್ಯರು ಕಾರು ಸೇರಿದಂತೆ ವಾಹನ ಖರೀದಿ ಮಾಡಿದ್ದಾರೆ. ನವರಾತ್ರಿ ದಿನಗಳಲ್ಲಿ ಈಗಾಗಲೇ ದಾಖಲೆ ಮಾರಾಟ ಕಂಡಿದ್ದರೆ, ದೀಪಾವಳಿ ಹಬ್ಬದ ವೇಳೆ ವಾಹನ ಮಾರಾಟ ದುಪ್ಪಟ್ಟಾಗುವ ಸಾಧ್ಯತೆ ಇದೆ.