ಭಾರತ vs ಆಸ್ಟ್ರೇಲಿಯಾ ಅಂಡರ್-19 ಟೆಸ್ಟ್: ವೈಭವ್ ಸೂರ್ಯವಂಶಿಗೆ ವಿವಾದಾತ್ಮಕ ಕ್ಯಾಚ್ ಔಟ್ ತೀರ್ಪು; ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ!

ಮೆಕೆನಾ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪು ವಿವಾದಕ್ಕೀಡಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 135 ರನ್ಗಳಿಗೆ ಆಲೌಟ್ ಆಗಿದ್ದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಭಾರತದ ಪರ ಆಯುಷ್ ಮ್ಹಾತ್ರೆ (4) ಹಾಗೂ ವಿಹಾನ್ ಮಲ್ಹೋತ್ರ (11) ಇನಿಂಗ್ಸ್ ಆರಂಭಿಸಿದ್ದರು. ಆದರೆ ನಾಲ್ಕನೇ ಓವರ್ನ 2ನೇ ಎಸೆತದಲ್ಲಿ ವಿಹಾನ್ ಔಟಾದರು. ಈ ಹಂತದಲ್ಲಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 20 ರನ್ ಚಚ್ಚಿದರು.
ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾಗಿದ್ದ ವೈಭವ್ ಸೂರ್ಯವಂಶಿ 7ನೇ ಓವರ್ನ 4ನೇ ಎಸೆತದಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಈ ಪಂದ್ಯದ 7ನೇ ಓವರ್ನ ಎಸೆದ ಚಾರ್ಲ್ಸ್ ಲಚ್ಮಂಡ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ವೈಭವ್ ಮುಂದಾಗಿದ್ದರು.
ಈ ವೇಳೆ ಚೆಂಡು ಬ್ಯಾಟ್ ಬದಿಯಿಂದ ಸಾಗಿ ವಿಕೆಟ್ ಕೀಪರ್ ಕೈ ಸೇರಿತು. ಅತ್ತ ಆಸ್ಟ್ರೇಲಿಯಾ ಆಟಗಾರರು ಮನವಿ ಮಾಡುತ್ತಿದ್ದಂತೆ ಅಂಪೈರ್ ಕ್ಯಾಚ್ ಔಟ್ ಎಂದು ತೀರ್ಪು ನೀಡಿದರು. ಆದರೆ ಚೆಂಡು ನನ್ನ ಬ್ಯಾಟ್ಗೆ ತಾಗಿಲ್ಲ. ಪ್ಯಾಡ್ಗೆ ಬಡಿದಿರುವುದು ಎಂದು ವೈಭವ್ ಸೂರ್ಯವಂಶಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿದರು.
ಅಲ್ಲದೆ ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕುವ ಮೂಲಕ ವೈಭವ್ ಸೂರ್ಯವಂಶಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದೀಗ ವೈಭವ್ ಔಟಾಗಿರುವ ವಿವಾದಾತ್ಮಕ ತೀರ್ಪಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್ ಆಡುತ್ತಿರುವ ಭಾರತ ಅಂಡರ್-19 ತಂಡವು 40 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ.