ರಿಷಬ್ ಶೆಟ್ಟಿಯ ‘ಕಾಂತಾರ’ ಕಥೆ ಮೊದಲು ಕೇಳಿದ್ದು ಅಪ್ಪು: ‘ನೀವೇ ನಟಿಸಿ, ಕಾಂಪ್ರಮೈಸ್ ಆಗಬೇಡಿ’ ಎಂದಿದ್ದ ಪುನೀತ್ ರಾಜ್‌ಕುಮಾರ್!

‘ಕಾಂತಾರ’ ಸಿನಿಮಾದ ಕಥೆ ಮೊದಲು ರೆಡಿ ಆಗಿತ್ತು. ರಿಷಬ್ ಶೆಟ್ಟಿ ಅವರು ಇದನ್ನು ನಿರ್ದೇಶನ ಮಾಡುವ ಉದ್ದೇಶ ಹೊಂದಿದ್ದರು. ಆರಂಭದಲ್ಲಿ ಅವರಿಗೆ ತಾವೇ ನಟಿಸುವ ಆಲೋಚನೆ ಇರಲೇ ಇಲ್ಲ. ಈ ಕಾರಣದಿಂದಲೇ ಅವರು ಸಿನಿಮಾಗೆ ಪುನೀತ್ ರಾಜ್‌ಕುಮಾರ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ಏನಾಯಿತು ಎಂಬುದನ್ನು ಪ್ರಗತಿ ಅವರು ವಿವರಿಸಿದ್ದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾ ದೊಡ್ಡ ಗೆಲುವನ್ನು ಕಂಡಿದೆ. ಈ ಚಿತ್ರದಿಂದ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಗೆಲುವಿನ ಸಿಹಿಯನ್ನು ಸವಿದಿದ್ದಾರೆ. ಹೀಗಿರುವಾಗಲೇ ಪ್ರಗತಿ ಶೆಟ್ಟಿ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ಕಾಂತಾರ ಸಿನಿಮಾದ ಕಥೆಯನ್ನು ಅಪ್ಪು ಮಾಡಬೇಕಿತ್ತು’ ಎಂದಿದ್ದರು. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರ ಗೆಲ್ಲಲು ಪುನೀತ್ ಆಶೀರ್ವಾದವೂ ಇದೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
‘ಕಾಂತಾರ’ ಸಿನಿಮಾದ ಕಥೆ ಮೊದಲು ರೆಡಿ ಆಗಿತ್ತು. ರಿಷಬ್ ಶೆಟ್ಟಿ ಅವರು ಇದನ್ನು ನಿರ್ದೇಶನ ಮಾಡುವ ಉದ್ದೇಶ ಹೊಂದಿದ್ದರು. ಆರಂಭದಲ್ಲಿ ಅವರಿಗೆ ತಾವೇ ನಟಿಸುವ ಆಲೋಚನೆ ಇರಲೇ ಇಲ್ಲ. ಈ ಕಾರಣದಿಂದಲೇ ಅವರು ಸಿನಿಮಾಗೆ ಪುನೀತ್ ರಾಜ್‌ಕುಮಾರ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ಏನಾಯಿತು ಎಂಬುದನ್ನು ಪ್ರಗತಿ ಅವರು ವಿವರಿಸಿದ್ದರು.
‘ಅಪ್ಪು ಸರ್ ಕಥೆ ಕೇಳಿದರು. ಕಥೆ ಇಷ್ಟಪಟ್ಟರು. ಅವರು ಡೇಟ್ಸ್ ಹೊಂದಾಣಿಕೆ ಮಾಡಲು ಸಾಧ್ಯವಾಗಿಲ್ಲ ಎಂದರು. ರಿಷಬ್ ಶೆಟ್ಟಿಗೆ ಪುಶ್ ಮಾಡೋ ಹಾಗೇ ಇರಲಿಲ್ಲ. ರಿಷಬ್ ಕಾಂಪ್ರಮೈಸ್ ಆಗಬೇಡಿ, ನೀವೇ ಮಾಡಿ ಎಂದು ಪುನೀತ್ ಹೇಳಿದ್ದರು. ಶೂಟಿಂಗ್ ನಡೆಯುವಾಗ ಪುನೀತ್ ಅವರು ರಿಷಬ್ನ ಕರೆದು ಶೂಟಿಂಗ್ ಹೇಗೆ ಆಗುತ್ತಿದೆ? ಏನಕ್ಕೂ ಕಾಂಪ್ರಮೈಸ್ ಆಗಬೇಡಿ ಎಂಬುದಾಗಿ ಹೇಳಿದ್ದರು’ ಎಂದು ಪ್ರಗತಿ ಶೆಟ್ಟಿ ವಿವರಿಸಿದ್ದರು.
‘ಬಹುಶಃ ಅಪ್ಪು ಆಶೀರ್ವಾದ ಇದೆ ಎಂದು ಅನಿಸುತ್ತದೆ. ಪುನೀತ್ ಇದ್ದಿದ್ದರೆ ಖಂಡೀತವಾಗಿಯೂ ಕರೆದು ಶುಭಕೋರುತ್ತಿದ್ದರು’ ಎಂದು ಪ್ರಗತಿ ಶೆಟ್ಟಿ ಹೇಳಿದ್ದರು. ‘ಕಾಂತಾರ’ ಯಶಸ್ಸಿನ ಬಳಿಕ ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರವೂ ಗೆಲುವು ಕಂಡಿದೆ. ಅನೇಕರು ಇದಕ್ಕೆ ಪುನೀತ್ ಆಶೀರ್ವಾದ ಕೂಡ ಕಾರಣ ಎಂದು ಹೇಳುತ್ತಾ ಇದ್ದಾರೆ.
ಪುನೀತ್ ರಾಜ್‌ಕುಮಾರ್ ಅವರು ಅನೇಕ ಸಂದರ್ಭದಲ್ಲಿ ರಿಷಬ್ನ ಬೆಂಬಲಿಸಿದ್ದಿದೆ. ಅವರ ಚಿತ್ರಗಳನ್ನು ನೋಡಿ ಹೊಗಳಿದ್ದಾರೆ. ಈಗ ‘ಕಾಂತಾರ: ಚಾಪ್ಟರ್ 1’ ಗೆಲುವಿನ ಸಮಯದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈ ಸಿನಿಮಾ 220 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋದು ಗಮನಾರ್ಹ.