“ರೆಡ್ ಬಾಲ್ಗೆ ಅನ್ಫಿಟ್ ಆದವರು ವೈಟ್ ಬಾಲ್ಗೆ ಫಿಟ್ ಆಗಿದ್ದು ಹೇಗೆ?”: ಅಯ್ಯರ್ ಆಯ್ಕೆಗಾರರ ನಡೆಗೆ ವೆಂಗ್ಸರ್ಕಾರ್ ಕಿಡಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ 15 ಸದಸ್ಯರುಗಳ ತಂಡದಲ್ಲಿ ಶ್ರೇಯಸ್ ಅಯ್ಯರ್ ಕೂಡ ಕಾಣಿಸಿಕೊಂಡಿದ್ದಾರೆ. ಅದು ಕೂಡ ಉಪನಾಯಕನಾಗಿ ಎಂಬುದು ವಿಶೇಷ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. ಈ ತಂಡದ ನಾಯಕನಾಗಿ ಶುಭ್ಮನ್ ಗಿಲ್ ಕಾಣಿಸಿಕೊಂಡರೆ, ಉಪನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಬಗ್ಗೆ ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡಿದ್ದರು. ದೀರ್ಘಾವಧಿಯ ಕ್ರಿಕೆಟ್ ಆಡುವಾಗ ಬೆನ್ನು ನೋವಿನ ಸಮಸ್ಯೆ ಎದುರಾಗುತ್ತಿದ್ದು, ಹೀಗಾಗಿ ಟೆಸ್ಟ್ ಕ್ರಿಕೆಟ್ನಿಂದ ಕೆಲ ಕಾಲ ಹೊರಗುಳಿಯುತ್ತಿರುವುದಾಗಿ ಅಯ್ಯರ್ ಬಿಸಿಸಿಐಗೆ ತಿಳಿಸಿದ್ದರು.
ಆದರೀಗ ಅದೇ ಶ್ರೇಯಸ್ ಅಯ್ಯರ್ ಅವರನ್ನು ಉಪನಾಯಕನನ್ನಾಗಿ ಭಾರತ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅತ್ತ ರೆಡ್ ಬಾಲ್ ಕ್ರಿಕೆಟ್ಗೆ ಅನ್ಫಿಟ್ ಆಗಿರುವ ಆಟಗಾರರನ್ನು ವೈಟ್ ಬಾಲ್ ಕ್ರಿಕೆಟ್ಗೆ ಹೇಗೆ ಆಯ್ಕೆ ಮಾಡಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ದಿಲೀಪ್ ವೆಂಗ್ಸಾಸ್ಕರ್ ಪ್ರತಿಕ್ರಿಯಿಸಿದ್ದಾರೆ.
ಅಯ್ಯರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪತ್ರ ಬರೆದು ಆರು ತಿಂಗಳ ಕಾಲ ರೆಡ್-ಬಾಲ್ ಕ್ರಿಕೆಟ್ನಿಂದ ಹಿಂದೆ ಸರಿಯಲು ಅನುಮತಿ ಕೋರಿದ್ದಾರೆ. ಅಯ್ಯರ್ ದೀರ್ಘಾವಧಿಯ ಸ್ವರೂಪದಲ್ಲಿ ಆಡುವಾಗ ಬೆನ್ನು ನೋವು ಅನುಭವಿಸುತ್ತಾರೆ. ದೇಶೀಯ ರೆಡ್-ಬಾಲ್ ಕ್ರಿಕೆಟ್ನ ಸಮಯವನ್ನು ತಮ್ಮ ಫಿಟ್ನೆಸ್ ಅನ್ನು ಸುಧಾರಿಸಲು ಮತ್ತು ದೀರ್ಘಕಾಲದ ಬೆನ್ನು ಸಮಸ್ಯೆಯಿಂದ ಚೇತರಿಸಿಕೊಳ್ಳಲು ಬಳಸಬೇಕೆಂದು ಬಿಸಿಸಿಐ ತಿಳಿಸಿದೆ.
ಇದೀಗ ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ನನಗೆ ಒಂದು ಸಂದಿಗ್ಧತೆಯಾಗಿದೆ. ಏಕೆಂದರೆ ಅಯ್ಯರ್ ಅವರು ಟೆಸ್ಟ್ ಕ್ರಿಕೆಟ್ ಆಡಲು ಅನ್ಫಿಟ್ ಎಂದು ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ಗೆ ಫಿಟ್ ಎಂದು ಹೇಳುತ್ತಿದ್ದಾರೆ. ಇಲ್ಲಿ ರೆಡ್ ಬಾಲ್ ಹಾಗೂ ವೈಟ್ ಬಾಲ್ ಕ್ರಿಕೆಟ್ ನಡುವಿನ ವ್ಯತ್ಯಾಸ ನನಗೆ ಅರ್ಥವಾಗುತ್ತಿಲ್ಲ.
ನೀವು ಬಿಳಿ ಚೆಂಡಿನ ಕ್ರಿಕೆಟ್ಗೆ ಫಿಟ್ ಆಗಿದ್ದರೆ, ನೀವು ಸ್ಪಷ್ಟವಾಗಿ ಕೆಂಪು ಚೆಂಡಿನ ಕ್ರಿಕೆಟ್ಗೆ ಫಿಟ್ ಆಗಿದ್ದೀರಿ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಎರಡು ಸ್ವರೂಪಗಳಲ್ಲಿ ಅಂತಹ ಮಹತ್ವದ ಬದಲಾವಣೆಯಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಓವರ್ಗಳ ಸಂಖ್ಯೆ ಸ್ವಲ್ಪ ಹೆಚ್ಚಿದೆ. ಇತ್ತ ಏಕದಿನ ಕ್ರಿಕೆಟ್ನಲ್ಲಿ 50 ಓವರ್ಗಳನ್ನು ಆಡಲಾಗುತ್ತದೆ. ಇದಾಗ್ಯೂ ಅವರು ಒಂದು ಸ್ವರೂಪಕ್ಕೆ ಓಕೆ ಮತ್ತೊಂದಕ್ಕೆ ನೋ ಅಂದಿರುವುದು ನಿಜಕ್ಕೂ ಅಚ್ಚರಿ ಎಂದು ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.
ಹೀಗೆ ಆಟಗಾರರು ಒಂದನ್ನು ಆಯ್ಕೆ ಮಾಡಿ, ಮತ್ತೊಂದು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಅದರಲ್ಲೂ ಟೆಸ್ಟ್ಗೆ ಅನ್ಫಿಟ್ ಘೋಷಿಸಿರುವ ಆಟಗಾರನಿಗೆ ಇದೀಗ ಏಕದಿನ ತಂಡದ ಉಪನಾಯಕತ್ವವನ್ನು ಸಹ ನೀಡಲಾಗಿದೆ. ಆಯ್ಕೆಗಾರರ ಇಂತಹ ನಡೆಗಳೇ ನನಗೆ ಅಚ್ಚರಿ ಮೂಡಿಸುತ್ತಿದೆ ಎಂದು ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.