ಹಕ್ಕಿ ಜ್ವರ ಭೀತಿ: ಕರ್ನಾಟಕ ಗಡಿಭಾಗಗಳಲ್ಲಿ ಹೈಅಲರ್ಟ್!

ಬೆಂಗಳೂರು:ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕರ್ನಾಟಕದ ಗಡಿಭಾಗದಲ್ಲಿ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದ 7 ಜಿಲ್ಲೆಗಳಲ್ಲಿ ಹುಲಿ, ಚಿರತೆ, ಕಾಗೆಗಳಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ ಕಾಗೆಗಳು ಮೃತಪಟ್ಟ ಬಗ್ಗೆಯೂ ವರದಿಯಾಗಿದೆ. ಈ ಕಾರಣದಿಂದ ಕರ್ನಾಟಕದ ಗಡಿ ಭಾಗಗಳಲ್ಲಿ ಎಚ್ಚರ ವಹಿಸಲಾಗಿದೆ.

ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ಕೋಳಿಗಳ ಮಾರಣಹೋಮ ನಡೆಯುತ್ತಿದೆ. ಇತರ ಪ್ರದೇಶಗಳಲ್ಲಿ ಚಿಕನ್ ಶಾಪ್ಗಳಲ್ಲಿ ನೂರಾರು ಕೋಳಿಗಳು ಸಾಯುತ್ತಿವೆ. ಈ ಬಗ್ಗೆ ಜನರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸತ್ತ ಕೋಳಿಗಳನ್ನ ಮಣ್ಣು ಮಾಡುತ್ತಿಲ್ಲ. ಬದಲಾಗಿ ಮೀನುಗಳಿಗೆ ಆಹಾರವಾಗಿ ಹಾಕಲಾಗುತ್ತಿದೆ. ಇದೇ ಮೀನುಗಳನ್ನು ತಿನ್ನುವ ಜನರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ನಗರಸಭೆ, ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆ ಪ್ರದೇಶದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೇರೆ ರಾಜ್ಯಗಳಿಂದ ಸೋಂಕು ಹರಡುವ ಭೀತಿ ಹಿನ್ನೆಲೆ ಬೀದರ್, ಬೆಳಗಾವಿ, ಬಳ್ಳಾರಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೇರೆ ರಾಜ್ಯಗಳಿಂದ ಆಮದು ಮಾಡಲಾಗುತ್ತಿರುವ ಕೋಳಿ ಹಾಗೂ ಮೊಟ್ಟೆಗಳಿಗೆ ನಿರ್ಬಂಧ ಹೇರಲಾಗಿದೆ. ಬೀದರ್ ಗಡಿಯಲ್ಲಿಯೂ ಹೈಅಲರ್ಟ್ ಘೋಷಿಸಲಾಗಿದೆ.