ಹಸುವಿನ ಬಾಲಕ್ಕೆ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ ಬಾಲಕನ ಬಂಧನ; ಪ್ರತಿದೂರು ದಾಖಲು

ಚಿಕ್ಕಮಗಳೂರು : ನಗರದ ವಿಜಯಪುರ ಬಡಾವಣೆಯಲ್ಲಿ ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದ ಘಟನೆ ನಡೆದಿದೆ. ಹಸುವಿನ ಬಾಲಕ್ಕೆ ಸೆಂಟ್ ಸ್ಪ್ರೇ ಮಾಡಿ ಲೈಟರ್‌ನಿಂದ ಬೆಂಕಿ ಹಚ್ಚಿದ 16 ವರ್ಷದ ಬಾಲಕನ ಕೃತ್ಯ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಸಂಜೆಯ ವೇಳೆ ರಸ್ತೆಯಲ್ಲಿ ಹಸು ನಿಂತಿದ್ದಾಗ, ಅಪ್ರಾಪ್ತ ಬಾಲಕ ತನ್ನ ಕೈಯಲ್ಲಿದ್ದ ಸೆಂಟ್ ಸ್ಪ್ರೇಯನ್ನು ಹಸುವಿನ ಬಾಲಕ್ಕೆ ಹೊಡೆದು ಬೆಂಕಿ ಹಚ್ಚಿದ್ದಾನೆ. ಈ ದೃಶ್ಯ ಕಂಡ ಸ್ಥಳೀಯರು ತಕ್ಷಣ ಬಾಲಕನನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಾಲಕನ ಹುಚ್ಚಾಟಕ್ಕೆ ಕೋಪಗೊಂಡು ಆತನಿಗೆ ಥಳಿಸಿರುವ ಆರೋಪ ಕೇಳಿ ಬಂದಿದೆ.

ಘಟನೆ ಬಗ್ಗೆ ಮಾಹಿತಿ ದೊರೆತ ಬಸವನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಹಸುವಿಗೆ ಬೆಂಕಿ ಹಚ್ಚಿದ ಕುರಿತು ಬಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ, ಬಾಲಕನ ತಾಯಿ ಶಬನಾ ಬಾನು ತನ್ನ ಮಗನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂದು ಪ್ರತಿದೂರು ನೀಡಿದ್ದು ಎರಡು ಕಡೆ ಅವರ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.