ಭಾವುಕ ಕ್ಷಣ: ಹುತಾತ್ಮ ಸೈನಿಕನ ತಂಗಿಯ ಮದುವೆಯಲ್ಲಿ ‘ಅಣ್ಣನ ಕರ್ತವ್ಯ’ ನಿಭಾಯಿಸಿದ ಸಹ ಸೈನಿಕರು

ನವದೆಹಲಿ: ಅತ್ಯಂತ ಭಾವುಕ ಕ್ಷಣದಲ್ಲಿ, ಹಿಮಾಚಲ ಪ್ರದೇಶದ ಸೈನಿಕರು ಹುತಾತ್ಮ ಸೈನಿಕನ ತಂಗಿಯ ಮದುವೆಯಲ್ಲಿ ಅಣ್ಣನ ಕರ್ತವ್ಯ ನಿಭಾಯಿಸಿರುವ ಘಟನೆ ನಡೆದಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದಲ್ಲಿ ನಡೆದ ಆಪರೇಷನ್ ಅಲರ್ಟ್ ಕಾರ್ಯಾಚರಣೆಯಲ್ಲಿ ಸೈನಿಕ ಹುತಾತ್ಮನಾಗಿದ್ದ. ಆತನ ತಂಗಿಯ ವಿವಾಹ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತ್ತು. ಈ ವೇಳೆ ಹಿಮಾಚಲ ಪ್ರದೇಶದ ಹಾಲಿ ಹಾಗೂ ಮಾಜಿ ಸೈನಿಕರು ಮುಂದೆ ನಿಂತು ಅಣ್ಣನ ಕರ್ತವ್ಯವನ್ನು ನಿಭಾಯಿಸಿದ್ದರಿಂದ ಇಡೀ ಮದುವೆ ಮಂಟಪ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಅಣ್ಣನ ಜೊತೆಗೆ ದೇಶವನ್ನು ಕಾಯುತ್ತಿದ್ದ ಸೈನಿಕರು, ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ್ದರಿಂದ ವಧುವಿನ ಕಣ್ಣಾಲಿಗಳು ಕೂಡ ತೇವಗೊಂಡಿದ್ದವು.

ಬೆಟ್ಟಗುಡ್ಡಗಳಿಂದಲೇ ತುಂಬಿರುವ ರಾಜ್ಯದ ಸುಂದರವಾದ ಪಟ್ಟಣದಲ್ಲಿ ಆರಾಧನಾ ಅವರ ವಿವಾಹ ನೆರವೇರಿದೆ. ಆದರೆ, ಇಡೀ ಮದುವೆಯಲ್ಲಿ ಆಕೆಯ ಸಹೋದರ ಆಶಿಶ್ ಕುಮಾರ್ ಇದ್ದಿರಲಿಲ್ಲ. ಆದರೆ, ಆಶಿಶ್ ಕುಮಾರ್ ಅವರ ರೆಜಿಮೆಂಟ್‌ನ ಹಾಲಿ ಸೈನಿಕರು ಹಾಗೂ ಕೆಲವು ಮಾಜಿ ಸೈನಿಕರು ಸಿರ್ಮೌರ್ ಜಿಲ್ಲೆಯ ಭರ್ಲಿ ಗ್ರಾಮದಲ್ಲಿರುವ ವಿವಾಹ ಸ್ಥಳಕ್ಕೆ ಬಂದು, ಆರಾಧನಾ ಅವರ ವಿವಾಹವನ್ನು ನಡೆಸಿಕೊಟ್ಟರು. ಅಣ್ಣ ಆಶಿಶ್ ಕುಮಾರ್ ಇದ್ದರೆ ಯವ ರೀತಿಯಲ್ಲಿ ಮದುವೆ ನಡೆಯುತ್ತಿತ್ತೋ ಅದೇ ರೀತಿಯಲ್ಲಿ ಸೈನಿಕರು ವಿವಾಹ ನಡೆಸಿಕೊಟ್ಟಿದ್ದಾರೆ. ಅಣ್ಣನ ಸ್ಥಾನದಲ್ಲಿ ನಿಂತು ಆಕೆಯ ವಿವಾಹ ಮಾಡಿದ್ದಾರೆ.
ಎಫ್‌ಡಿ ಉಡುಗೊರೆಯಾಗಿ ನೀಡಿದ ಸೈನಿಕರು
ಮದುವೆಯಲ್ಲಿ, ಪೌಂಟಾ ಮತ್ತು ಶಿಲ್ಲೈನ ಸೈನಿಕರು ಮತ್ತು ಮಾಜಿ ಸೈನಿಕರು ಅವಳ ಸಹೋದರನ ಪಾತ್ರ ನಿಭಾಯಿಸಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅವರು ವಧುವನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿ, ಸಹೋದರನ ಪಾತ್ರವನ್ನು ಪೂರೈಸಿದರು.
ಪ್ರೀತಿ ಮತ್ತು ಬೆಂಬಲದ ಸಂಕೇತವಾಗಿ, ಅವರು ಆರಾಧನಾಗೆ ವಿವಾಹದ ಆಶೀರ್ವಾದವಾಗಿ ಸ್ಥಿರ ಠೇವಣಿಯನ್ನು ಉಡುಗೊರೆಯಾಗಿ ನೀಡಿದರು, ಸಾಂಕೇತಿಕವಾಗಿ ಅವಳ ಸಹೋದರನಿಂದ ಉಂಟಾದ ಶೂನ್ಯವನ್ನು ತುಂಬಿದರು.
ಮದುವೆಯಲ್ಲಿ ಹಾಜರಿದ್ದವರೆಲ್ಲರೂ ಅನಿರೀಕ್ಷಿತ ಗೌರವದಿಂದ ಕಣ್ಣೀರು ಹಾಕಿದರು, ಇಡೀ ದೃಶ್ಯವು ಮದುವೆ ಸಂಭ್ರಮವನ್ನು ಇನ್ನಷ್ಟು ಭಾವುಕ ಮಾಡಿತ್ತು. ಸೈನಿಕರು ವಧುವಿನ ಜೊತೆ ಆಕೆಯ ಗಂಡನ ಮನೆಗೆ ಹೋಗುವ ಮೂಲಕ ಸಹೋದರ ಆಶಿಶ್ ಕುಮಾರ್‌ನ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.ಫೆಬ್ರವರಿ 2024 ರಲ್ಲಿ ಆಪರೇಷನ್ ಅಲರ್ಟ್ ಸಮಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಆಶಿಶ್ ಕುಮಾರ್ ಹುತಾತ್ಮರಾಗಿದ್ದರು.
ಸೈನಿಕರು ನಿಜವಾದ ಮಣ್ಣಿನ ಮಕ್ಕಳು
ಭಾವುಕವಾಗಿ ಮದುವೆಯನ್ನು ನೋಡಿದ್ದ ವೃದ್ದರೊಬ್ಬರು, ‘ “ನನ್ನ ಜೀವನದಲ್ಲಿ ನಾನು ಅನೇಕ ಮದುವೆಗಳನ್ನು ನೋಡಿದ್ದೇನೆ, ಆದರೆ ಇಂದು ಕುಟುಂಬ ಮತ್ತು ತ್ಯಾಗದ ನಿಜವಾದ ಅರ್ಥವನ್ನು ನಾನು ನೋಡಿದೆ. ಅದಕ್ಕಾಗಿಯೇ ನಾವು ಸೈನಿಕರನ್ನು ನಿಜವಾದ ಮಣ್ಣಿನ ಪುತ್ರರು ಎಂದು ಕರೆಯುತ್ತೇವೆ” ಎಂದು ಹೇಳಿದ್ದಾರೆ.
ಮದುವೆಯ ದಿನ ಆರಾಧನಾ ಅವರ ಅಣ್ಣನಾಗಿ ಹವಿಲ್ದಾರ್ ರಾಕೇಶ್ ಕುಮಾರ್, ನಾಯಕ್ ರಾಂಪಾಲ್ ಸಿಂಗ್, ನಾಯಕ್ ಮನೀಶ್ ಕುಮಾರ್, ಗ್ರೆನೇಡಿಯರ್ ಅಭಿಷೇಕ್, ಗ್ರೆನೇಡಿಯರ್ ಆಯುಷ್ ಕುಮಾರ್, ಮೇಜರ್ ಅನುಪ್ ತೋಮರ್, ಪ್ಯಾರಾಟ್ರೂಪರ್ ನಾದೀಶ್ ಕುಮಾರ್ ಮತ್ತು ಮಾಜಿ ಸೈನಿಕರು ಇದ್ದರು.