ದಸರಾ ಸ್ವಯಂಸೇವಕ ಹುದ್ದೆಗೆ ವಿದ್ಯಾರ್ಥಿಗಳಿಗೆ ಬೆದರಿಕೆ: ಮೈಸೂರಿನ ‘ಕಾವಾ’ ವಿದ್ಯಾರ್ಥಿಗಳ ಗಂಭೀರ ಆರೋಪ

ಮೈಸೂರು: ಒಂದೆಡೆ ವಿಶ್ವವಿಖ್ಯಾತ ಮೈಸೂರು ದಸರಾ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ ಇನ್ನೊಂದೆಡೆ ನಮಗೆ ಹೆದರಿಸಿ, ಬೆದರಿಸಿ ದಸರಾ (Mysore Dasara) ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ನೇಮಿಸಿಕೊಂಡು ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂದು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) (Kava Collage) ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

ಟಿಸಿ ಕೊಡುವುದಾಗಿ ವಿದ್ಯಾರ್ಥಿಗಳಿಗೆ ಬೆದರಿಕೆ
ದಸರಾ ಕಾರ್ಯಕ್ರಮಗಳು ಎಂದ ಮೇಲೆ ಭರ್ಜರಿ ಕೆಲಸಗಳು ಇರುತ್ತದೆ. ಅದಕ್ಕೆ ವಿದ್ಯಾರ್ಥಿಗಳನ್ನ ಬಳಸಿಕೊಳ್ಳುವ ಅನೇಕ ಘಟನೆಗಳು ವರದಿ ಆಗಿದೆ. ಆದರೆ ಈ ಸ್ಕೌಸ್ಟ್ ಆಂಡ್ ಗೈಡ್ಸ್ ತಂಡದಿಂದ ಕೆಲಸಗಳನ್ನ ಮಾಡಿಸಲಾಗುತ್ತದೆ. ಆದರೆ ಈ ಬಾರಿಯೇ ವಿದ್ಯಾರ್ಥಿಗಳನ್ನ ಹೆದರಿಸಿ ಕೆಲಸ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಕಾವಾ ಕಾಲೇಜಿನ ವಿದ್ಯಾರ್ಥಿಗಳಿಗೆ ದಸರಾ ಕಾರ್ಯಕ್ರಮಕ್ಕೆ ಸ್ವಯಂ ಸೇವಕರಾಗಿ ಸೇರಿಕೊಂಡು ಕೆಲಸ ಮಾಡಿ, ಇಲ್ಲದಿದ್ದರೆ ನಿಮಗೆ ಟಿಸಿ ಕೊಟ್ಟು ಮನೆಗೆ ಕಳುಹಿಸುತ್ತೇವೆ ಎಂದು ಕಾಲೇಜಿನ ಆಡಳಿತಾಧಿಕಾರಿ ಹಾಗೂ ಕಾಲೇಜಿನ ಡೀನ್ ಮತ್ತು 5 ವಿಭಾಗಗಳು ಮುಖ್ಯಸ್ಥರು ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿಗಳು ಪತ್ರಿಕಾ ಪ್ರಕಟಣೆ ಮಾಡಿ ದೂರಿದ್ದಾರೆ.
ಅಲ್ಲದೇ, ವಿದ್ಯಾರ್ಥಿಗಳು ದಸರಾ ಕಾರ್ಯಕ್ರಮದಲ್ಲಿ ನಾವು ಏಕೆ ಭಾಗವಹಿಸಬೇಕು? ನಾವು ಕೆಲಸಗಳನ್ನ ಏಕೆ ಮಾಡಬೇಕು? ಇದರಿಂದ ನಮ್ಮ ಭವಿಷ್ಯಕ್ಕೆ ಯಾವ ರೀತಿ ಸಹಾಯ ಮಾಡುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ನಮ್ಮದ್ದು ಸರ್ಕಾರಿ ಕಾಲೇಜು. ಸರ್ಕಾರ ಹೇಳಿದ ಹಾಗೆ ನಾವು ಎಲ್ಲಾ ಕೆಲಸಗಳನ್ನ ಮಾಡಬೇಕು. ಕಸ ಗುಡಿಸಬೇಕು ಎಂದರೆ ಅದನ್ನೂ ಸಹ ಮಾಡಬೇಕಾಗುತ್ತದೆ. ನಾವು ನಿಮಗೆ ಹೇಳುವ ಎಲ್ಲಾ ಕೆಲಸಸವನ್ನ ಮಾಡಿ ಇಲ್ಲದಿದ್ದರೆ ಕಾಲೇಜನ್ನ ಬಿಡಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಕಲಾ ಶಿಕ್ಷಣ
ಇನ್ನು ಈ ಕಾವಾ ಕಾಲೇಜಿನಲ್ಲಿ ಪ್ರತಿ ವರ್ಷ ಪ್ರತಿಯೊಂದು ವಿಭಾಗದಲ್ಲಿ ರಾಷ್ಟ್ರಮಟ್ಟದ ಕಲಾವಿದರನ್ನ ಕರೆಸಿ ಒಂದೊಂದು ಕಾರ್ಯಾಗಾರಗಳನ್ನ ಮಾಡಲಾಗುತ್ತದೆ. ಆದರೆ ಈ ಬಾರಿ ಈ ಕಾರ್ಯಾಗಾರಗಳನ್ನ ದಸರಾ ಕಾರ್ಯಕ್ರಮಗಳ ಜೊತೆ ವಿಲೀನ ಮಾಡಲಾಗಿದ್ದು. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಅಲ್ಲದೇ, ದಸರಾ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದರೆ ಮಾತ್ರ ಸಿ1, ಸಿ2 ಅಂಕ ನೀಡುತ್ತೇವೆ ಎಂದು ಶಿಕ್ಷಕರು ಹೆದರಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಇವೆಲ್ಲಾ ಒಂದು ಕಡೆ ಆದರೆ ಕಾಲೇಜುಗಳಲ್ಲಿ ಹಾಜರಾತಿ ವಿಚಾರದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಬಯೋಮೆಟ್ರಿಕ್ ಹಾಜರಾತಿ ಆರಂಭ ಮಾಡಿ, ಅದನ್ನ ಕಡ್ಡಾಯಗೊಳಿಸಲಾಗಿದೆ. ಕಾಲೇಜಿಗೆ ಬೆಳಗ್ಗೆ 9.30ಕ್ಕೆ ಹಾಜರಿರಬೇಕು ಹಾಗೂ ಸಂಜೆ 4.30ಕ್ಕೆ ಕಾಲೇಜಿನಿಂದ ಹೋಗಬಹುದು ಎಂದು ಸೂಚನೆ ಕೊಡಲಾಗಿದೆ. ಆದರೆ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಕೆಲವು ಅತಿಥಿ ಉಪನ್ಯಾಸಕರು ಬೆಳಗ್ಗೆ 11.30ರ ಸುಮಾರಿಗೆ ಕಾಲೇಜಿಗೆ ಬರುತ್ತಾರೆ. ಅದರ ಜೊತೆಗೆ ವಿದ್ಯಾರ್ಥಿಗಳ ಕಲಾಕೃತಿ ರಚನೆಗೆ ಬೇಕಾದ ವಸ್ತುಗಳನ್ನ ಸಹ ತಡವಾಗಿ ತರುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಯಲು ಕಷ್ಟವಾಗುವುದಿಲ್ಲವೇ? ಎಂದೂ ಸಹ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.