ಸಿಡಿಮದ್ದು ಸ್ಫೋಟಗೊಂಡು ಮನೆ ಛಿದ್ರ, ದಂಪತಿಗೆ ಗಂಭೀರ ಗಾಯ

ಹಾಸನ: ನಿಗೂಢ ಸ್ಪೋಟಕ್ಕೆ ಇಡೀ ಮನೆ ಛಿದ್ರಗೊಂಡು ದಂಪತಿ ಗಂಭೀರವಾಗಿ ಗಾಯಗೊಂಡ ಘಟನೆ ಹಳೇಆಲೂರು ಗ್ರಾಮದಲ್ಲಿ ನಡೆದಿದ್ದು, ಇದೀಗ ಸ್ಪೋಟಕ್ಕೆ ಸಿಡಿಮದ್ದು ಕಾರಣ ಎಂದು ವರದಿಯಾಗಿದೆ.

ಘಟನೆಯಲ್ಲಿ ಸುದರ್ಶನ್ ಆಚಾರ್ (32), ಕಾವ್ಯ (27) ಹಾಗೂ ಒಂದು ಮಗುವಿಗೆ ಗಾಯವಾಗಿದೆ. ಗಾಯಾಳುಗಳಿಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ದಂಪತಿ ಸ್ಥಿತಿ ಚಿಂತಾಜನಕವಾಗಿದೆ. ಉಳಿದಂತೆ ಮಗು ಸೇರಿ ಮನೆಯಲ್ಲಿದ್ದ ಇತರ ನಾಲ್ವರು ಸುರಕ್ಷಿತವಾಗಿದ್ದಾರೆ.
ಮನೆಯಲ್ಲಿದ್ದ ಎರಡು ಸಿಲಿಂಡರ್ ಹಾಗೂ ಗೀಸರ್ ಹಾಗೇ ಇದ್ದೂ ಸ್ಫೋಟಕ್ಕೆ ಕಾರಣವೇನು ಎಂಬುದು ನಿಗೂಢವಾಗಿಯೇ ಉಳಿದಿತ್ತು. ಈಗ ಸಿಡಿಮದ್ದು ತಯಾರಿಕೆ ಮಾಡುತ್ತಿದ್ದ ಮದ್ದು ಸ್ಫೋಟಗೊಂಡು ಈ ದುರಂತ ನಡೆದಿರುವುದು ಗೊತ್ತಾಗಿದೆ. ಮನೆಯಲ್ಲಿ ಸಿಡಿಮದ್ದನ್ನು ತಯಾರಿಸುತ್ತಿದ್ದರು. ಅದಕ್ಕಾಗಿ ಮದ್ದನ್ನು ಸಂಗ್ರಹಿಸಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.