ಅತ್ಯಾಚಾರಕ್ಕೆ ಸಹಕರಿಸಿದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್: ಮನುಸ್ಮೃತಿ, ಗಾಂಧಿ ಹೇಳಿಕೆ ಉಲ್ಲೇಖ

ಬೆಂಗಳೂರು : ಮಹಿಳೆ ಗೌರವದ ಬಗ್ಗೆ ಹೇಳುವ ಮನುಸ್ಮೃತಿಯ ಶ್ಲೋಕ ಮತ್ತು ದೇಶದ ಸ್ವಾತಂತ್ರ್ಯ ಕುರಿತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೇಳಿಕೆ ಉಲ್ಲೇಖಿಸಿದ ಹೈಕೋರ್ಟ್, ‘ಯುವತಿ ಮೇಲೆ ಅತ್ಯಾ*ಚಾರ ನಡೆಸಲು ಆರೋಪಿಯೊಬ್ಬನಿಗೆ ಸಹಕಾರ ನೀಡಿದ ಆರೋಪದಲ್ಲಿ ಒಳಗಾಗಿರುವ ವ್ಯಕ್ತಿಗೆ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಆರೋಪಿ ಸೈಯದ್ ಫರ್ವೇಜ್ ಮುಷರಫ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠವು ಆದೇಶಿಸಿದೆ.

ಭವಿಷ್ಯದಲ್ಲಿ ಕನಸು ಕಂಡಿರುವ ಯುವತಿ ಮೇಲೆ ಅರ್ಜಿದಾರ ಆರೋಪಿ ಘೋರ ಅಪರಾಧ ಎಸಗಿದ್ದಾನೆ. ಈ ಕೃತ್ಯ ಮಹಿಳೆಯ ಜೀವನದಲ್ಲಿ ಮರೆಯಲಾಗದ ನೋವಾಗಿ ಉಳಿದುಕೊಳ್ಳಲಿದೆ. ಇದರಿಂದ ಹೊರ ಬರುವುದಕ್ಕೆ ಕಷ್ಟಕರವಾಗಲಿದೆ. ಆದ್ದರಿಂದ ಜಾಮೀನು ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ಪೀಠ ಹೇಳಿದೆ.
ಅಲ್ಲದೆ, ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ, ಯತ್ರೈತಾಸ್ತುನ ಪೂಜ್ಯಂತೇ ಸರ್ವಾಸ್ತತ್ರಫಲಾಃ ಕ್ರಿಯಾಃ’ (ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆಯೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ, ಎಲ್ಲಿ ಮಹಿಳೆಯರಿಗೆ ಅವಮಾನಕ್ಕೊಳಗಾಗುತಾರೆಯೋ ಅಲ್ಲಿ ನಡೆಯುವ ಕ್ರಿಯೆಗಳು ನಿಷ್ಪಲವಾಗಲಿದೆ) ಎಂದು ಮನಸ್ಮೃತಿಯಲ್ಲಿನ ಶ್ಲೋಕ ಹೇಳುತ್ತದೆ. ‘ಮಧ್ಯರಾತ್ರಿ ರಸ್ತೆಯಲ್ಲಿ ಮಹಿಳೆಯರು ಧೈರ್ಯದಿಂದ ನಡೆದು ಹೋಗುವ ದಿನ ಭಾರತ ಸ್ವಾತಂತ್ರ್ಯ ಪಡೆದಂತೆ’ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ನೀಡಿದ ಹೇಳಿಕೆಗಳನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ವಿವರ
ಬಿಹಾರದ ಬಂಕಾ ಮೂಲದ ಪರಿಶಿಷ್ಟ ಪಂಗಡಕ್ಕೆ ಸೇರಿದ್ದ 19 ವರ್ಷದ ಸಂತ್ರಸ್ತೆ 2025ರ ಏ.2 ರಂದು ಬೆಳಗ್ಗೆ 1.30ರ ಸಂದರ್ಭದಲ್ಲಿ ತನ್ನ ಸಹೋದರ ಸಂಬಂಧಿಯೊಂದಿಗೆ ಕೆ.ಆರ್.ಪುರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದರು. ಆಹಾರದ ತರಲು ಕೆ.ಆರ್.ಪುರದಿಂದ ಮಹದೇವಪುರದ ಕಡೆಗೆ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಮೊದಲನೇ ಆರೋಪಿ ಮತ್ತು ಅರ್ಜಿದಾರ (ಎರಡನೇ ಆರೋಪಿ) ಸಂತ್ರಸ್ತೆ ಮತ್ತು ಅವರ ಸಹೋದರನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಬಳಿಕ ಅರ್ಜಿದಾರ ಸಂತ್ರಸ್ತೆಯ ಸಹೋದರನ್ನು ಹಿಡಿದುಕೊಂಡಿದ್ದ. ಮೊದಲ ಆರೋಪಿ ಸಂತ್ರಸ್ತೆ ಮೇಲೆ ಅತ್ಯಾ*ಚಾರವೆಸಗಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಪ್ರಕರಣ ಅರ್ಜಿದಾರ ಬಂಧನಕ್ಕೆ ಒಳಗಾಗಿದ್ದ. ಮಹದೇವಪುರ ಠಾಣಾ ಪೊಲೀಸರು, ಮಹಿಳೆಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ, ಅವಮಾನಕ್ಕೆ ಗುರಿಪಡಿಸಿದ, ಜೀವ ಬೆದರಿಕೆ ಹಾಕಿದ ಆರೋಪ, ಜಾತಿ ನಿಂದನೆ ಅಪರಾಧ ಸಂಬಂಧ ಆರೋಪಿ ವಿರುದ್ಧ ದೋಷಾರೋಪಟ್ಟಿ ಸಲ್ಲಿಸಿದ್ದರು. ಜಾಮೀನು ಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ್ದರಿಂದ ಅರ್ಜಿದಾರ ಆರೋಪಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು.