ದಸರಾ ಆನೆಗಳ ಬಳಿ ರೀಲ್ಸ್ ಮಾಡಿದರೆ ದಂಡ: ಫೋಟೋ ನಿಷೇಧ, ಕಮಾಂಡೋಗಳ ನಿಯೋಜನೆಗೆ ಸಚಿವರ ಆದೇಶ

ಬೆಂಗಳೂರು: ದಸರಾ ಆನೆಗಳ ಬಳಿ ರೀಲ್ಸ್ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಆನೆಗಳ ಬಳಿ ಹೋಗದಂತೆ ತಡೆಯಲು ಕಮಾಂಡೋ ಬಳಕೆಗೆ ತಿಳಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಮೈಸೂರು ಅರಮನೆಯಲ್ಲಿಂದು ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಭೋಜನ ಬಡಿಸಿದ ಬಳಿಕ ಮಾತನಾಡಿದ ಅವರು, ದಸರಾ ಆನೆಗಳ ಸೊಂಡಿಲು, ದಂತ ಹಿಡಿದುಕೊಂಡು ಫೋಟೋ ರೀಲ್ಸ್ ಮಾಡಿ ಸಾಮಾಜಿಕ ತಾಣಗಳಲ್ಲಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನೆಗಳನ್ನು ಪಳಗಿಸಿದ್ದರೂ, ಕೆಲವೊಂದು ಸಂದರ್ಭದಲ್ಲಿ ಪ್ರಾಣಿಗಳ ವರ್ತನೆಯನ್ನು ಊಹಿಸುವುದೂ ಅಸಾಧ್ಯ.ಹೀಗಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಆನೆಗಳ ಬಳಿ ಯಾರಿಗೂ ಬಿಡದಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಫೋಟೋ, ರೀಲ್ಸ್ ಮಾಡಿದ್ದು ಇಂತಹವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಸೂಚಿಸಲಾಗಿದೆ ಎಂದರು.
