ಭೀಕರ ಅಪಘಾತ: ಬಾಗಲಕೋಟೆಯಲ್ಲಿ ಇಬ್ಬರು ಸಾವು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ಭೀಕರ ದುರ್ಘಟನೆಯೊಂದು ನಡೆದಿದೆ. ಇನ್ನೋವಾ ಕಾರು ಮತ್ತು ಟಂಟಂ ವಾಹನಗಳ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಮೃತ ದುರ್ದೈವಿಗಳು. ಗಾಯಗೊಂಡವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೋವಾ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ
ಊಟಕ್ಕೆಂದು ಸಮೀಪದ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ತೆರಳಿದ್ದ ಐವರಿದ್ದ ಟಂಟಂ ವಾಹನ ತಡರಾತ್ರಿ ಬಾಗಲಕೋಟೆ ಕಡೆಗೆ ವಾಪಸ್ ಹೊರಟಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಮೃತ ದುರ್ದೈವಿಗಳು. ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ, ಗುರುಪ್ರಸಾದ್ ಸುಂಕದ ಗಾಯಾಳುಗಳು.
ಮೃತರು ಮತ್ತು ಗಾಯಾಳುಗಳು ನವನಗರದ 45 ನೇ ಸೆಕ್ಟರ್ ನಿವಾಸಿಗಳೇ ಆಗಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಇನ್ನೋವಾ ಕಾರು ಚಾಲಕನ ಅಜಾಗರೂಕತೆ ಚಾಲನೆ ಕಾರಣ ಎಂದು ಹೇಳಲಾಗುತ್ತಿದೆ. ಮುಂದೆ ಹೋಗುತ್ತಿದ್ದ ಮಹಿಂದ್ರಾ ಪಿಕ್ ಅಪ್ ವಾಹನ್ ಡಿಕ್ಕಿ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಟಂ ಟಂ ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಲಾರದಲ್ಲಿ ವ್ಯಾಗನಾರ್ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ಕೋಲಾರ ಜಿಲ್ಲೆ ಮುಳಬಾಗಿಲು ತಾಲುಕಿನ ಒಮ್ಮಸಂದ್ರ ಗ್ರಾಮದ ಬಳಿ ವ್ಯಾಗನಾರ್ ಕಾರು ಮತ್ತು ಬೈಕ್ನ ನಡುವೆ ಡಿಕ್ಕಿಯಾಗಿದೆ. ಇದರ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಂದ್ರದ ರಾಮಕುಪ್ಪಂ ನಿವಾಸಿ ಗಂಗಿರೆಡ್ಡಿ ಮೃತ ಬೈಕ್ ಸವಾರ. ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಗಂಗಿರೆಡ್ಡಿ ಕೆಲಸದ ನಿಮಿತ್ತ ತನ್ನ ಹುಟ್ಟೂರಾದ ರಾಮಕುಪ್ಪಂಗೆ ಬಂದಿದ್ದ.
ಈ ವೇಳೆ ಮುಳಬಾಗಿಲಿಗೆ ಬಂದು ವಾಪಸ್ ಹೋಗುವ ಸಂದರ್ಭದಲ್ಲಿ ಒಮ್ಮಸಂದ್ರ ಗ್ರಾಮದ ಬಳಿ ವ್ಯಾಗನಾರ್ ಕಾರ್ ಡಿಕ್ಕಿಯಾಗಿ ಗಂಗಿರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಗಿರೆಡ್ಡಿ ತಲೆಗೆ ಹೆಲ್ಮೆಟ್ ಧರಿಸಿದ್ದರೂ ಸಹ ತಲೆಗೆ ಗಂಭೀರಾವಾದ ಗಾಯಗಳಾಗಿತ್ತು. ಈ ಘಟನೆ ಸಂಬಂಧ ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
