ಮದ್ದೂರು ಗಲಭೆಗೆ ಸಂಚು: ಕಲ್ಲುತೂರಾಟದ ಹಿಂದೆ ಪೂರ್ವಯೋಜಿತ ಪಿತೂರಿ

ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಪೂರ್ವ ಯೋಜಿತವಾಗಿತ್ತೆಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಟಾಬಯಲಾಗಿದೆ. ಇದರೊಂದಿಗೆ, ಘಟನೆಗೆ ಟ್ವಿಸ್ಟ್ ದೊರೆತಂತಾಗಿದೆ. ಘಟನೆ ಸಂಬಂಧ ಪೊಲೀಸರು ಆರಂಭದಲ್ಲಿ 22 ಮಂದಿ ಆರೋಪಿಗಳನ್ನು ಗುರುತಿಸಿದ್ದರು. ನಂತರ 29 ಮಂದಿಯನ್ನು ಗುರುತಿಸಿ ವಶಕ್ಕೆ ಪಡೆದಿದ್ದರು. ಇದೀಗ ಆರೋಪಿಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸದ್ಯ ಎಲ್ಲ 32 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಯ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದು, ಸ್ವಾಮಿ ಎಂಬುವವರ ನೇತೃತ್ವದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಲು ಪೂರ್ವಯೋಜನೆ ಮಾಡಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಟಾರ್ಗೆಟ್ ಮಾಡಿದ್ದ ಗಣೇಶ ಮೆರವಣಿಗೆಯ ಬದಲು ಬೇರೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿರುವುದು ಪತ್ತೆಯಾಗಿದೆ.
ಮದ್ದೂರು ಕಲ್ಲು ತೂರಾಟಕ್ಕೆ ರಾಜಕೀಯ ದ್ವೇಷ ಕಾರಣವೇ?
ಪೊಲೀಸರು ಈಗ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ. ಮದ್ದೂರು ಕಲ್ಲು ತೂರಾಟ ರಾಜಕೀಯ ದ್ವೇಷದ ಭಾಗವೇ ಅಥವಾ ಧಾರ್ಮಿಕ ಕಾರಣಗಳಿಂದ ಗಲಭೆ ಎಬ್ಬಿಸಲು ಮಾಡಿದ ಹುನ್ನಾರವೇ ಎಂಬುದರ ಬಗ್ಗೆ ತನಿಖೆ ಮುಂದುವರಿಯುತ್ತಿದೆ.
ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಸೆಪ್ಟೆಂಬರ್ 7 ರಂದು ಸಂಜೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿತ್ತು. ಘಟನೆ ನಂತರ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕಲ್ಲು ತೂರಾಟ ಪ್ರತಿಭಟಿಸಿ ಮರುದಿನ ಹಿಂದೂ ಸಂಘಟನೆಗಳು ಮೆರವಣಿಗೆ ನಡೆಸಿದ್ದವು. ಆ ಸಂದರ್ಭ ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.
ರಾಜಕೀಯ ತಿರುವು ಪಡೆದಿದ್ದ ಪ್ರಕರಣ
ಘಟನೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಗ್ದಾಳಿ ನಡೆಸಿದ್ದವು. ಬಿಜೆಪಿ ನಾಯಕರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ, ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಗೃಹ ಸಚಿವ ಪರಮೇಶ್ವರ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಮದ್ದೂರು ಕಲ್ಲು ತೂರಾಟ ಪೂರ್ವಯೋಜಿತ ಎಂಬ ಆರೋಪಗಳಿವೆ. ಆ ದೃಷ್ಟಿಕೋನದಿಂದಲೂ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಇದೀಗ, ಘಟನೆ ಪೂರ್ವಯೋಜಿತ ಕೃತ್ಯ ಎಂಬುದು ಬಯಲಾಗಿದೆ.
