‘ಐ ಲವ್ ಮೊಹಮ್ಮದ್’ ವಿವಾದ: ಬರೇಲಿಯಲ್ಲಿ ಕಲ್ಲುತೂರಾಟ, ಲಾಠಿ ಚಾರ್ಜ್

ಬರೇಲಿ : ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಐ ಲವ್ ಮೊಹಮ್ಮದ್ ವಿವಾದ, ಇದೀಗ ಈ ಆಂದೋಲನದ ಮೂಲ ಸ್ಥಳವಾದ ಉತ್ತರ ಪ್ರದೇಶದ ಬರೇಲಿಯಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಪುನಃ ಸಂಘರ್ಷಕ್ಕೆ ಕಾರಣವಾಗಿದೆ. ಐ ಲವ್ ಮೊಹಮ್ಮದ್ ಆಂದೋಲನಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದ್ದರಿಂದ ಆಕ್ರೋಶಿತಗೊಂಡ ಗುಂಪು ಮಸೀದಿಯ ಮುಂಭಾಗ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ನಡೆದಿದೆ.ಸ್ಥಳೀಯ ಧಾರ್ಮಿಕ ನಾಯಕ ತೌಕೀರ್ ರಜಾ ಅವರ ಕರೆಯ ಮೇರೆಗೆ ‘ಐ ಲವ್ ಮೊಹಮ್ಮದ್’ ಆಂದೋಲನ ನಡೆಸಲು ಜನರು ಮಸೀದಿಯ ಹೊರಗೆ ಜಮಾಯಿಸಿದ್ದರು. ಆದರೆ, ಸ್ಥಳೀಯ ಆಡಳಿಯ ಅನುಮತಿ ನೀಡದ ಕಾರಣ ಪ್ರತಿಭಟನೆಯನ್ನು ರದ್ದುಗೊಳಿಸಲಾಯಿತು. ಇದರಿಂದ ಕೋಪಗೊಂಡ ಜನ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಕೆಲವರು ಕಲ್ಲು ತೂರಾಟ ನಡೆಸಿದರು. ಬಳಿಕ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.

ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆ.4ರಂದು ಕಾನ್ಪುರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲವರು ‘ಐ ಲವ್ ಮೊಹಮ್ಮದ್’ ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿದ್ದರು. ಇದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತದೆ ಎಂದು ಹಿಂದೂಗಳು ಆರೋಪಿಸಿದ್ದರು. ನಂತರ ‘ಐ ಲವ್ ಮಹಾದೇವ್’ ಆಂದೋಲನ ಆರಂಭವಾಗಿತ್ತು. ಅದೀಗ ಹಲವು ರಾಜ್ಯಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ.
ಐ ಲವ್ ಮಹಮ್ಮದ್ V/S ಮಹಾದೇವ ದಂಗಲ್
ನವದೆಹಲಿ : ಉತ್ತರಪ್ರದೇಶದಲ್ಲಿ ಇಸ್ಲಾಮಿಕ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಹುಟ್ಟಿಕೊಂಡ ಐ ಲವ್ ಮೊಹಮ್ಮದ್ ಪೋಸ್ಟರ್ ವಿವಾದ ಮತ್ತು ಅದಕ್ಕೆ ಪ್ರತಿಯಾಗಿ ಐ ಲವ್ ಮಹಾದೇವ್ ಪೋಸ್ಟರ್ ವಾರ್ ಇದೀಗ ದೇಶದ 8 ರಾಜ್ಯಕ್ಕೆ ಹಬ್ಬಿದೆ. ಹಲವು ರಾಜ್ಯಗಳಲ್ಲಿ ಈ ವಿಷಯ ಹಿಂದೂ- ಮುಸ್ಲಿಂ ಗಲಭೆಗೆ ಕಾರಣವಾಗಿದೆ.
ವಿವಾದ ಹುಟ್ಟಿದ್ದು ಈದ್ ಮಿಲಾದ್ ವೇಳೆ
ಉತ್ತರಪ್ರದೇಶದ ಕಾನ್ಪುರದಲ್ಲಿ ಸೆ.4ರಂದು ನಡೆದ ಈದ್ ಇ ಮಿಲಾದ್ ಉನ್ ನಬಿ ಮೆರವಣಿಗೆಯಲ್ಲಿ ಕೆಲ ಯುವಕರು ‘ ಐ ಲವ್ ಮಹಮ್ಮದ್’ ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಟ್ರಾಫಿಕ್ ಜಂಕ್ಷನ್‌ಗಳು, ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು. ಆದರೆ ಇದು ಹೊಸ ಸಂಪ್ರದಾಯ. ಮೆರವಣಿಗೆ ಹೋಗುವ ಮಾರ್ಗದಲ್ಲಿ ಇಂಥ ಪೋಸ್ಟರ್ ಪ್ರದರ್ಶನ ಕೋಮುಸಾಮರಸ್ಯಕ್ಕೆ ಧಕ್ಕೆ ತರಬಹುದು ಎಂದು ಹಿಂದೂ ಯುವಕರು ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ ಅನುಮತಿ ಪಡೆಯದ್ದಕ್ಕೆ ಪೊಲೀಸರು ಪೋಸ್ಟರ್ ಕಿತ್ತೆಸೆದರು. ಅಲ್ಲಿಂದ ದಂಗಲ್ ಆರಂಭ. ಜಾಲತಾಣದಲ್ಲಿ ಅಭಿಯಾನ ಶುರು. ಮುಸ್ಲಿಮರು ಬೀದಿಗಿಳಿದು ಪೋಸ್ಟರ್‌ಗಳನ್ನು ಮತ್ತೆ ಹಾಕಬೇಕೆಂದು ಪಟ್ಟು ಹಿಡಿದರು. ಲಾಠಿ ಜಾರ್ಜ್ ನಡೆಯಿತು. ಹಲವರ ವಿರುದ್ಧ ಕೇಸ್ ಬಿತ್ತು. ಬಳಿಕ ವಿವಾದ ಕಾನ್ಪುರದಿಂದ, ರಾಯ್‌ಬರೇಲಿ, ಸಂಭಲ್‌ನಂತಹ ಇತರ ಜಿಲ್ಲೆಗಳಿಗೂ ಹಬ್ಬಿತು.
