‘ಜೈ ಹನುಮಾನ್’ ಒಪ್ಪಿಕೊಳ್ಳಲು ಕಾರಣ ತಿಳಿಸಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೀಗ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ‘ಕಾಂತಾರ’ ಬಳಿಕ ಅವರು ನಟಿಸುತ್ತಿರುವ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದು, ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು ಎಂದು ವಿವರಿಸಿದ್ದಾರೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ಬರೋಬ್ಬರಿ ಹಲವು ವರ್ಷಗಳ ಕಾಲ ಕಷ್ಟಪಟ್ಟಿರುವುದಾಗಿ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರಚಾರದಲ್ಲಿರುವ ರಿಷಬ್ ಶೆಟ್ಟಿ, ಸಂದರ್ಶನವೊಂದರ ವೇಳೆ ತಮ್ಮ ಮುಂದಿನ ಸಿನಿಮಾ ‘ಜೈ ಹನುಮಾನ್’ ಬಗ್ಗೆಯೂ ಮಾತನಾಡಿದ್ದಾರೆ. ಆ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನೆಂದು ವಿವರಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಮುಗಿಯುವ ವರೆಗೆ ಬೇರೆ ಯಾವ ಸಿನಿಮಾವನ್ನೂ ಸಹ ಒಪ್ಪಿಕೊಳ್ಳಬಾರದು ಎಂದು ರಿಷಬ್ ಶೆಟ್ಟಿ ನಿರ್ಧರಿಸಿದ್ದರಂತೆ. ಆದರೆ ಪ್ರಶಾಂತ್ ವರ್ಷ ಬಂದು ‘ಜೈ ಹನುಮಾನ್’ ಸಿನಿಮಾದ ಕತೆ ಹೇಳಿದಾಗ ಸಿನಿಮಾ ಒಪ್ಪಿಕೊಳ್ಳದೆ ಇರಲಾಗಲಿಲ್ಲವಂತೆ. ‘ಪ್ರಶಾಂತ್ ವರ್ಮಾ ಅದ್ಭುತವಾಗಿ ಕತೆ ಮಾಡಿಕೊಂಡಿದ್ದಾರೆ. ಅವರು ಹೇಳಿದ ಕತೆ ಕೇಳಿದ ಬಳಿಕ ನನಗೆ ನೋ ಹೇಳಲು ಆಗಲೇ ಇಲ್ಲ’ ಎಂದಿದ್ದಾರೆ ರಿಷಬ್ ಶೆಟ್ಟಿ.
‘ಪ್ರಶಾಂತ್ ವರ್ಮಾ ಅದ್ಭುತವಾದ ಕತೆ ಮಾಡಿದ್ದಾರೆ. ನಾನು ಸಿನಿಮಾ ಒಪ್ಪಿದ ಬಳಿಕ ಫೋಟೊಶೂಟ್ ಮಾಡಿಸಿದೆವು. ಈಗ ಅವರು ಪ್ರೀ ಪ್ರೊಡಕ್ಷನ್ನಲ್ಲಿ ತೊಡಗಿಕೊಂಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಿಡುಗಡೆ ಬಳಿಕ ಒಂದು ದಿನಾಂಕ ನಿಗದಿ ಮಾಡಿ ನಾವು ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದೇವೆ. ಪ್ರಶಾಂತ್ ವರ್ಮಾ ಹಾಗೂ ಮೈತ್ರಿ ಮೂವಿ ಮೇಕರ್ಸ್ ಜೊತೆಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಜೈ ಹನುಮಾನ್’ ಹೆಸರಿನ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು ರಿಷಬ್ ಶೆಟ್ಟಿ ಹನುಮಂತನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಈ ಹಿಂದೆ ‘ಹನು ಮ್ಯಾನ್’ ಸಿನಿಮಾ ಮಾಡಿದ್ದ ಪ್ರಶಾಂತ್ ವರ್ಮಾ ಈಗ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಸರಣಿ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2 ರಂದು ಬಿಡುಗಡೆ ಆಗಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ಬಿಡುಗಡೆ ಆಗಲಿದೆ.
