ಒಡಿಶಾದಲ್ಲಿ ಭೀಕರ ಅಪಘಾತ: ತಪ್ಪು ದಿಕ್ಕಿನಲ್ಲಿ ಬಂದು ಟ್ರಕ್ಗೆ ಡಿಕ್ಕಿ ಹೊಡೆದ ಬಸ್, 6 ಸಾವು, 10 ಗಾಯ

ಒಡಿಶಾ: ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ಇಂದು ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತ(Accident) ದಲ್ಲಿ 6 ಮಂದಿ ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದ ಆರು ಜನರಲ್ಲಿ ಮೂವರು ಮಹಿಳೆಯರು.ಕೆ ಬಲಂಗ್ ಪೊಲೀಸ್ ಠಾಣೆ ಬಳಿಯ ರಾಷ್ಟ್ರೀಯ ಹೆದ್ದಾರಿ -520 ರಲ್ಲಿ ಬೆಳಗ್ಗೆ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಚಿಕಿತ್ಸೆ ಪಡೆಯುತ್ತಿರುವಾಗ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪಶ್ಚಿಮ ವಲಯದ ಡಿಐಜಿ ಬ್ರಿಜೇಶ್ ಕುಮಾರ್ ರೈ ತಿಳಿಸಿದ್ದಾರೆ.

ಒಬ್ಬ ಮೃತ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ, ಆದರೆ ಐವರ ಗುರುತು ದೃಢಪಟ್ಟಿದೆ. ಮೃತರಲ್ಲಿ ಕರ್ಮಪಾಲ್ ಸಿಂಗ್, ಶಬರ್ಬಾಲಾ, ಪುಷ್ಪಾ ಗೋಪಿ, ಸತ್ಯಭಾಮ ಠಾಕೂರ್ ಮತ್ತು ಮೇರಿ ನಾಗ್ ಸೇರಿದ್ದಾರೆ. ಎಲ್ಲಾ ಬಲಿಪಶುಗಳು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.
ಬಸ್ ರೂರ್ಕೆಲಾದಿಂದ ಕೊಯ್ಡಾಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಯ ಒಂದು ಬದಿಯನ್ನು ದುರಸ್ತಿಗಾಗಿ ಮುಚ್ಚಿದ್ದರಿಂದ ಬಸ್ ತಪ್ಪು ಪಥದಲ್ಲಿ ಪ್ರಯಾಣಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.