ಫೈನಲ್ನಲ್ಲಿ ಭಾರತಕ್ಕೆ ಸವಾಲು: ಟೀಂ ಇಂಡಿಯಾಗೆ ನೇರವಾಗಿ ಎಚ್ಚರಿಕೆ ಕೊಟ್ಟ ಪಾಕ್ ವೇಗಿ ಶಾಹೀನ್ ಅಫ್ರಿದಿ

ಏಷ್ಯಾಕಪ್ನ 17ನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ. ಹೀಗೆ ಫೈನಲ್ಗೆ ಪ್ರವೇಶಿಸಿದ ತಂಡವು ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್ ಮ್ಯಾಚ್ನಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲಿದೆ.

ಈ ಬಾರಿಯ ಏಷ್ಯಾಕಪ್ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆಯಾ? ಈ ಪ್ರಶ್ನೆಗೆ ಇಂದು (ಸೆ.25) ಉತ್ತರ ಸಿಗಲಿದೆ. ಏಕೆಂದರೆ ಭಾರತ ತಂಡವು ಈಗಾಗಲೇ ಫೈನಲ್ಗೆ ಪ್ರವೇಶಿಸಿದೆ. ಅತ್ತ ಇಂದು ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆದ್ದರೆ ಫೈನಲ್ಗೆ ಎಂಟ್ರಿ ಕೊಡಲಿದೆ. ಹೀಗಾದಲ್ಲಿ ಸೆಪ್ಟೆಂಬರ್ 28 ರಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕ್ ವೇಗಿ ಶಾಹೀನ್ ಅಫ್ರಿದಿ ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ತಂಡವನ್ನು ಇನ್ಮುಂದೆ ನಮ್ಮ ಪ್ರಬಲ ಪ್ರತಿಸ್ಪರ್ಧಿ ಎಂದು ಬಿಂಬಿಸಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದ್ದರು.
ಭಾರತ ತಂಡವು ಪಾಕ್ ವಿರುದ್ಧ ಏಕಪಕ್ಷೀಯವಾಗಿ ಪಂದ್ಯ ಗೆಲ್ಲುತ್ತಿದೆ. ಇಲ್ಲಿ ಪ್ರತಿಸ್ಪರ್ಧೆ ಅಥವಾ ಪೈಪೋಟಿ ಎಂಬುದೇ ಇಲ್ಲ. ಪ್ರತಿ ಸಲ ಏಕಪಕ್ಷೀಯವಾಗಿ ನಾವೇ ಗೆಲ್ಲುತ್ತಿರುವಾಗ, ಪೈಪೋಟಿಯ ಮಾತೇ ಬರಲ್ಲ. ಹೀಗಾಗಿ ನೀವೆಲ್ಲರೂ ಈ ‘ಪೈಪೋಟಿ’ಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದರು.
ಒಂದು ತಂಡವು ಪರಸ್ಪರ 15 ಅಥವಾ 20 ಪಂದ್ಯಗಳನ್ನು ಆಡಿದರೆ, ಅದರಲ್ಲಿ ಉಭಯ ತಂಡಗಳು ಸ್ 7-7 ಅಥವಾ 8-7 ಪಂದ್ಯಗಳನ್ನು ಗೆದ್ದರೆ ಮಾತ್ರ ಅದನ್ನು ಪೈಪೋಟಿ ಎಂದು ಕರೆಯಲಾಗುತ್ತದೆ. ಆದರೆ ನನ್ನ ಊಹೆ ಪ್ರಕಾರ ನಾವು ಪಾಕಿಸ್ತಾನ್ ವಿರುದ್ಧ 13-0, 10-1 ಅಂತರದಿಂದ ಮೇಲುಗೈ ಹೊಂದಿದ್ದೇವೆ.
ಹೀಗಾಗಿ ಭಾರತಕ್ಕೆ ಪಾಕಿಸ್ತಾನ್ ಸಾಟಿಯೇ ಅಲ್ಲ. ಇದೇ ಕಾರಣದಿಂದ ಇನ್ಮುಂದೆ ಉಭಯ ತಂಡಗಳ ಪಂದ್ಯವನ್ನು ಪೈಪೋಟಿ ಎಂದು ಬಿಂಬಿಸದಿರಿ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮನವಿ ಮಾಡಿದ್ದರು.
ಸೂರ್ಯಕುಮಾರ್ ಯಾದವ್ ಅವರ ಈ ಹೇಳಿಕೆ ಕುರಿತು ಶಾಹೀನ್ ಅಫ್ರಿದಿ ಅವರನ್ನು ಕೇಳಿದಾಗ, ಅವರು ಏನು ಬೇಕಾದರೂ ಹೇಳಲಿ. ಅವರಿಗೆ ಅವರದೇ ಆದ ದೃಷ್ಟಿಕೋನವಿದೆ. ನಾವು ಸಹ ಏಷ್ಯಾಕಪ್ ಗೆಲ್ಲಲು ಬಂದಿದ್ದೇವೆ. ಹೀಗಾಗಿ ನಮ್ಮ ಗುರಿ ಫೈನಲ್ಗೇರುವುದು.
ನಾವು ಫೈನಲ್ಗೇರಿದರೆ ಬಳಿಕ ನೋಡ್ಕೋತೀವಿ. ಫೈನಲ್ನಲ್ಲಿ ನಾವು ಏನು? ನಾವು ಏನಲ್ಲ ಎಂಬುದನ್ನು ತೋರಿಸುತ್ತೇವೆ. ಆವಾಗ ನೋಡೋಣ ಎಂದು ಶಾಹೀನ್ ಅಫ್ರಿದಿ ಹೇಳಿದ್ದಾರೆ.
ಇದೀಗ ಶಾಹೀನ್ ಅಫ್ರಿದಿಯ ಹೇಳಿಕೆಯು ಭಾರೀ ವೈರಲ್ ಆಗಿದ್ದು, ಟೀಮ್ ಇಂಡಿಯಾ ಅಭಿಮಾನಿಗಳು ಪಾಕ್ ತಂಡವು ಫೈನಲ್ಗೇರುವುದನ್ನು ಎದುರು ನೋಡುತ್ತಿದ್ದಾರೆ. ಈ ಮೂಲಕ ಪಾಕ್ ಪಡೆಯನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಬಯಸುತ್ತಿದ್ದಾರೆ.
