ದಂಡ ಬಾಕಿ ಉಳಿಸಿಕೊಂಡು ಓಡಾಡುವಂತಿಲ್ಲ; ಬೆಂಗಳೂರಿನಲ್ಲಿ ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ಕಾದಿದೆ ಸಂಕಷ್ಟ

ಬೆಂಗಳೂರು: ಸಿಲಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರು (bangaluru) ಸಂಚಾರ ದಟ್ಟಣೆ ನಗರವೆಂದು ಹೇಳಲಾಗುತ್ತದೆ. ಟ್ರಾಫಿಕ್ ಸಮಸ್ಯೆಯಿಂದ ಜನರು ಬೇಸತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಪರಿಹರಿಸಲು ಬೆಂಗಳೂರು ಸಂಚಾರ ಪೊಲೀಸರು ಹಲವು ಯೋಜನೆಗಳನ್ನು ಜಾರಿ ಮಾಡುತ್ತಿರುತ್ತಾರೆ. ಈಗಾಗಲೇ ನಗರದಲ್ಲಿ ಅಳವಡಿಸಿರುವ ಎಐ ಆಧಾರಿತ ಕ್ಯಾಮೆರಾಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿದೆ. ಆದರೆ ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಎಐ ಆಧಾರಿತ ಬಿಲ್ಬೋರ್ಡ್ಗಳು (AI-powered billboard) ಬಂದಿವೆ. ಈ ಬಿಲ್‍ಬೋರ್ಡ್ ರಿಯಲ್ ಟೈಮ್‌ನಲ್ಲಿ ನಿಮ್ಮ ವಾಹನದ ನಿಯಮ ಉಲ್ಲಂಘನೆ ಸೇರಿದಂತೆ ಬಾಕಿ ದಂಡದ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ.

ಬೆಂಗಳೂರು ಸಂಚಾರ ಪೊಲೀಸರು ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತೊಂದು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ಅದುವೇ ಎಐ ಆಧಾರಿತ ಡಿಜಿಟಲ್ ಜಾಹೀರಾತು ಫಲಕ ಅಥವಾ ಬಿಲ್‍ಬೋರ್ಡ್.
ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಕಾರ್ಸ್ 24 ಸಹಯೋಗದಲ್ಲಿ ನಗರದ ಅತ್ಯಂತ ವಾಹನ ಸಂಚಾರ ಹೊಂದಿರುವ ಪ್ರದೇಶಗಳಲ್ಲಿ ಒಂದಾದ ಟ್ರಿನಿಟಿ ಸರ್ಕಲ್ನಲ್ಲಿ ಈ ಎಐ ಆಧಾರಿತ ಡಿಜಿಟಲ್ ಜಾಹೀರಾತು ಫಲಕವನ್ನು ಅಳವಡಿಸಲಾಗಿದೆ. ಈ ವೃತ್ತದಿಂದ ಹಾದುಹೋಗುವ ವಾಹನಗಳ ಸಂಚಾರ ಉಲ್ಲಂಘನೆ ಸೇರಿದಂತೆ ಬಾಕಿ ದಂಡದ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ಈ ಬಿಲ್‍ಬೋರ್ಡ್ ಅತ್ಯಾಧುನಿಕ ಎಐ ಆಧಾರಿತ ಕ್ಯಾಮೆರಾಗಳನ್ನು ಹೊಂದಿದ್ದು, ನೂರು ಮೀಟರ್ ದೂರದಿಂದಲೇ ವಾಹನಗಳ ನೋಂದಣಿ ಸಂಖ್ಯೆಯನ್ನು ಸ್ಕ್ಯಾನ್ ಮಾಡುತ್ತದೆ. ಕ್ಷಣ ಮಾತ್ರದಲ್ಲೇ ಇದು ರಾಷ್ಟ್ರೀಯ ವಾಹನ್ ಡೇಟಾಬೇಸ್‌ನಿಂದ ನಿಮ್ಮ ವಾಹನದ ಇಡೀ ಜಾತಕವನ್ನು ನೀಡುತ್ತದೆ. ಅಂದರೆ ಬಾಕಿ ಇರುವ ಯಾವುದೇ ಇ-ಚಲನ್ ಆಗಿರಬಹುದು, ಅವಧಿ ಮೀರಿದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರ ಅಥವಾ ಇತರ ಸಂಚಾರ ನಿಮಯ ಉಲ್ಲಂಘನೆಗಳನ್ನು ನೇರವಾಗಿ ಪರದೆಯ ಮೇಲೆ ಡಿಸ್‌ಪ್ಲೇ ಮಾಡುವ ಮೂಲಕ ಜಗಜ್ಜಾಹೀರು ಮಾಡುತ್ತದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಬೆಂಗಳೂರು ಸಂಚಾರ ಪೊಲೀಸರ ಈ ನೂತನ ಪ್ರಯೋಗವು ವಾಹನ ಚಾಲಕರಲ್ಲಿ ಜಾಗೃತಿಯೊಂದಿಗೆ ದಂಡ ಪಾವತಿಸಲು ಪ್ರೇರೇಪಿಸಲಿದೆ. ಅಷ್ಟೇ ಅಲ್ಲದೆ ಅವರಲ್ಲಿ ಜವಾಬ್ದಾರಿಯನ್ನು ಮೂಡಿಸಲಿದೆ. ಈ ಉಪಕ್ರಮದ ಬಗ್ಗೆ ಕಾರ್ಸ್24 ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಮಾರುಕಟ್ಟೆ ಅಧಿಕಾರಿ ಗಜೇಂದ್ರ ಜಂಗಿಡ್ ಮಾತನಾಡಿದ್ದು, ನಾವು ವಾಹನ ಸವಾರರಿಗೆ ಬಾಕಿ ದಂಡ ಪಾವತಿಸುವುದನ್ನು ನೆನಪಿಸುವುದಲ್ಲದೆ, ಸಂಚಾರ ನಿಯಮದ ಬಗ್ಗೆಯೂ ತಿಳಿಹೇಳುತ್ತಿದ್ದೇವೆ. ಈ ಚಿಕ್ಕ ಪ್ರಯತ್ನ ಜೀವನಾಡಿಗೆ ಕೊಡುಗೆ ನೀಡುತ್ತದೆ ಎಂದಿದ್ದಾರೆ.
