ಏಷ್ಯಾಕಪ್ 2025: ಒಂದು ಪಂದ್ಯ, ಮೂರು ತಂಡಗಳ ಫೈನಲ್ ಭವಿಷ್ಯ ನಿರ್ಧಾರ!

Asia Cup 2025: ಏಷ್ಯಾಕಪ್ 2025ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿದ್ದವು. ಈ ಎಂಟು ತಂಡಗಳಲ್ಲಿ ಈಗಾಗಲೇ 5 ಟೀಮ್ಗಳು ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ಏಷ್ಯಾಕಪ್ ಫೈನಲ್ ರೇಸ್ನಲ್ಲಿ ಉಳಿದಿರುವುದು ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್. ಈ ಮೂರು ತಂಡಗಳಲ್ಲಿ ಎರಡು ಟೀಮ್ ಫೈನಲ್ ಆಡುವುದು ಖಚಿತ

ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 15 ಪಂದ್ಯಗಳು ಮುಗಿದಿದ್ದು, ಇನ್ನುಳಿದಿರುವುದು ಕೇವಲ 3 ಮ್ಯಾಚ್ಗಳು ಮಾತ್ರ. ಈ ಮೂರು ಪಂದ್ಯಗಳೊಂದಿಗೆ ಈ ಬಾರಿಯ ಏಷ್ಯಾಕಪ್ನಲ್ಲಿ ಫೈನಲ್ ಆಡಲಿರುವ ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.
ಅದರಲ್ಲೂ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಫೈನಲ್ಗೆ ಎಂಟ್ರಿ ಕೊಡುವುದು ಖಚಿತ. ಒಂದು ವೇಳೆ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದರೆ, ಅತ್ತ ಪಾಕಿಸ್ತಾನ್ ತಂಡದ ಫೈನಲ್ ಹಾದಿ ಕಠಿಣವಾಗಲಿದೆ. ಹಾಗಿದ್ರೆ ಮೂರು ತಂಡಗಳ ಫೈನಲ್ ಸಮೀಕರಣ ಹೇಗಿದೆ ಎಂದು ನೋಡೋಣ..
ಭಾರತ: ಟೀಮ್ ಇಂಡಿಯಾ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಪಾಕಿಸ್ತಾನ್ ತಂಡವು ಈಗಾಗಲೇ 2 ಪಂದ್ಯಗಳನ್ನಾಡಿದ್ದು, ಮುಂದಿನ ಮ್ಯಾಚ್ನಲ್ಲಿ ಗೆದ್ದರೂ ಒಟ್ಟು 4 ಅಂಕಗಳನ್ನು ಮಾತ್ರ ಪಡೆಯಲಿದೆ. ಅತ್ತ ಪಾಕ್ ತಂಡ ತನ್ನ ಕೊನೆಯ ಪಂದ್ಯವಾಡಬೇಕಿರುವುದು ಬಾಂಗ್ಲಾದೇಶ್ ವಿರುದ್ಧ. ಅಂದರೆ ಪಾಕ್ ಅಥವಾ ಬಾಂಗ್ಲಾದೇಶ್ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದರೂ ಭಾರತ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿಯೇ ಭಾರತ ತಂಡವು ಮುಂದಿನ 2 ಮ್ಯಾಚ್ಗಳಲ್ಲಿ ಒಂದು ಗೆಲುವು ದಾಖಲಿಸಿದರೆ ಫೈನಲ್ಗೆ ಎಂಟ್ರಿ ಕೊಡುವುದು ಖಚಿತ. ಅದರಂತೆ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಟೀಮ್ ಇಂಡಿಯಾ ಗೆದ್ದರೆ ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ.
ಬಾಂಗ್ಲಾದೇಶ್: ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಗೆದ್ದರೂ ನೇರವಾಗಿ ಫೈನಲ್ಗೆ ಎಂಟ್ರಿ ಕೊಡುವುದಿಲ್ಲ. ಏಕೆಂದರೆ ಪಾಕಿಸ್ತಾನ್ ಹಾಗೂ ಭಾರತ ತಂಡಕ್ಕೆ ಒಂದೊಂದು ಪಂದ್ಯಗಳಿವೆ. ಇತ್ತ ಟೀಮ್ ಇಂಡಿಯಾ ಇಂದು ಸೋತರೂ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ಗೇರಲು ಅವಕಾಶವಿದೆ. ಆದರೆ ಬಾಂಗ್ಲಾದೇಶ್ ತಂಡ ಫೈನಲ್ಗೇರಲು ಭಾರತ ಮತ್ತು ಪಾಕಿಸ್ತಾನ್ ವಿರುದ್ಧ ಗೆಲ್ಲಲೇಬೇಕು. ಒಂದು ವೇಳೆ ಬಾಂಗ್ಲಾದೇಶ್ ತಂಡವು ಭಾರತದ ವಿರುದ್ಧ ಗೆದ್ದು ಪಾಕಿಸ್ತಾನ್ ವಿರುದ್ಧ ಸೋತರೂ ಫೈನಲ್ಗೆ ಅರ್ಹತೆ ಪಡೆಯಬಹುದು. ಆದರೆ ಇಂತಹದೊಂದು ಅವಕಾಶ ಸೃಷ್ಟಿಯಾಗಲು ಬಾಂಗ್ಲಾದೇಶ್ ತಂಡವು ಪಾಕಿಸ್ತಾನ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.
ಪಾಕಿಸ್ತಾನ್: ಪಾಕ್ ಪಡೆಯು ಫೈನಲ್ಗೇರಲು ಬಾಂಗ್ಲಾದೇಶ್ ವಿರುದ್ಧ ಗೆಲ್ಲಲೇಬೇಕು. ಅದರಲ್ಲೂ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ್ ಸೋತರೆ ಪಾಕಿಸ್ತಾನ್ ತಂಡದ ಹಾದಿ ಸುಗಮವಾಗಲಿದೆ. ಏಕೆಂದರೆ ಬಾಂಗ್ಲಾ ಪಡೆ ಸೋತರೆ ನೆಟ್ ರನ್ ರೇಟ್ನಲ್ಲಿ ಇಳಿಕೆಯಾಗಲಿದೆ. ಅತ್ತ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಸೋಲಿಸಿ 4 ಅಂಕಗಳೊಂದಿಗೆ ನೇರವಾಗಿ ಫೈನಲ್ಗೇರಬಹುದು. ಒಂದು ವೇಳೆ ಪಾಕಿಸ್ತಾನ್ ತಂಡವು ಕೊನೆಯ ಪಂದ್ಯದಲ್ಲಿ ಸೋತರೆ ಬಾಂಗ್ಲಾದೇಶ್ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ.
ಹೀಗಾಗಿಯೇ ಸೂಪರ್-4 ಹಂತದ ಕೊನೆಯ ಮೂರು ಪಂದ್ಯಗಳು ಈ ಬಾರಿಯ ಫೈನಲಿಸ್ಟ್ಗಳನ್ನು ನಿರ್ಧರಿಸಲಿದೆ. ಅದರಲ್ಲೂ ಇಂದಿನ ಮ್ಯಾಚ್ನಲ್ಲಿ ಬಾಂಗ್ಲಾದೇಶ್ ವಿರುದ್ಧ ಭಾರತ ತಂಡ ಗೆದ್ದರೆ ಟೀಮ್ ಇಂಡಿಯಾ ಫೈನಲ್ ಆಡುವುದು ಖಚಿತ. ಅತ್ತ ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವು ಸೆಮಿಫೈನಲ್ ಪೈಪೋಟಿಯಾಗಿ ಮಾರ್ಪಡಲಿದೆ.
