ಬಾಲಿವುಡ್ ಸಿನಿಮಾ ಮಾಡಲು ಹೋಗಿ ‘ಬುದ್ಧಿ’ ಕಲಿತು ಬಂದ ಆ ನಟ ಯಾರು ಗೊತ್ತಾ?

ಬಾಲಿವುಡ್ನ ರಾಜಕೀಯ, ಅಲ್ಲಿನವರ ನೆಪೊಟಿಸಮ್ ಇನ್ನೂ ಹಲವು ವಿಷಯಗಳು ಆಗಾಗ್ಗೆ ಚರ್ಚೆಗೆ ಬರುತ್ತಲೇ ಇರುತ್ತವೆ. ಬಾಲಿವುಡ್ ಬಗ್ಗೆ ಸ್ವತಃ ಬಾಲಿವುಡ್ನವರೇ ಟೀಕೆಗಳನ್ನು ಮಾಡುತ್ತಿರುತ್ತಾರೆ. ಇದೀಗ ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಬಾಲಿವುಡ್ಗೆ ಹೋಗಿ ಪಟ್ಟ ಕಷ್ಟಗಳನ್ನು ಮತ್ತೊಬ್ಬ ಬಾಲಿವುಡ್ ನಿರ್ದೇಶಕ ವಿವರಿಸಿದ್ದಾರೆ.

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕರಲ್ಲಿ ಬಾಸಿಲ್ ಜೋಸೆಫ್ ಸಹ ಒಬ್ಬರು. ಬಾಸಿಲ್ ನಿರ್ದೇಶನದ ‘ಮಿನ್ನಲ್ ಮುರಲಿ’ ದೊಡ್ಡ ಹಿಟ್ ಆಗಿತ್ತು. ನಟನಾಗಿಯೂ ಸಹ ಹಲವಾರು ಹಿಟ್ ಸಿನಿಮಾಗಳನ್ನು ಬಾಸಿಲ್ ಜೋಸೆಫ್ ನೀಡಿದ್ದಾರೆ. ಆದರೆ ಬಾಲಿವುಡ್ ಸಿನಿಮಾ ಮಾಡಲು ಹೋಗಿ ಎರಡು ವರ್ಷ ವ್ಯರ್ಥ ಮಾಡಿದ್ದಲ್ಲದೆ, ಬಾಲಿವುಡ್ಡಿಗರ ವರ್ತನೆಯಿಂದ ಬೇಸತ್ತು ಹೋದರಂತೆ ಬಾಸಿಲ್. ಈ ಬಗ್ಗೆ ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅನುರಾಗ್ ಕಶ್ಯಪ್, ತಾವು ಮಲಯಾಳಂ ಮನೋರಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಸಿಲ್ ಜೋಸೆಫ್ ಅವರನ್ನು ಭೇಟಿ ಆಗಿದ್ದಾಗಿ ಹೇಳಿದ್ದಾರೆ. ಬಾಸಿಲ್ ಅವರೊಟ್ಟಿಗೆ ಸಾಕಷ್ಟು ಸಮಯ ಕಳೆದೆ. ನಾನು ಬಾಲಿವುಡ್ನಲ್ಲಿ ಎಂಥಹಾ ಸನ್ನಿವೇಶಗಳನ್ನು ಅನುಭವಿಸಿದೆನೋ ಅದನ್ನೇ ಬಾಸಿಲ್ ಜೋಸೆಫ್ ಸಹ ಅನುಭವಿಸಿದ್ದಾರೆ ಎಂದಿದ್ದಾರೆ.
‘ಬಾಸಿಲ್, ‘ಮಿನ್ನಲ್ ಮುರಲಿ’ ಸಿನಿಮಾ ಹಿಟ್ ಆದ ಬಳಿಕ ಬಾಲಿವುಡ್ಗೆ ಹೋಗಿದ್ದರಂತೆ. ಅಲ್ಲಿ ‘ಶಕ್ತಿಮಾನ್’ ಸಿನಿಮಾ ಮಾಡುವುದು ಅವರ ಉದ್ದೇಶವಾಗಿತ್ತಂತೆ. ಕೆಲವು ನಟರು, ನಿರ್ಮಾಣ ಸಂಸ್ಥೆಗಳೊಟ್ಟಿಗೆ ಬಾಸಿಲ್ ಜೋಸೆಫ್ ಮಾತನಾಡಿದರಂತೆ. ಅನುರಾಗ್ ಹೇಳಿದಂತೆ ಸುಮಾರು ಎರಡು ವರ್ಷಗಳ ಕಾಲ ‘ಶಕ್ತಿಮಾನ್’ ಸಿನಿಮಾದ ಮೇಲೆ ಬಾಸಿಲ್ ಕೆಲಸ ಮಾಡಿದರಂತೆ. ಆದರೆ ಕೊನೆಗೂ ಸಿನಿಮಾ ಆಗಲಿಲ್ಲವಂತೆ. ಇದಕ್ಕೆಲ್ಲ ಬಾಲಿವುಡ್ನವರ ಅಹಂ ಕಾರಣ ಎಂದಿದ್ದಾರೆ.
ಬಾಸಿಲ್ ಜೋಸೆಫ್, ಬಾಲಿವುಡ್ನ ಕೆಲವು ನಟರು, ನಿರ್ಮಾಪಕರ ಅಹಂಗಳು ಎಷ್ಟು ಕೆಟ್ಟದಿತ್ತು ಎಂದು ನಗುತ್ತಲೇ ವಿವರಿಸುತ್ತಿದ್ದರು. ತಮ್ಮ ಜೀವನದ ಎರಡು ವರ್ಷವನ್ನು ಅವರು ಬಾಲಿವುಡ್ನ ಕೆಲವರಿಂದ ಹಾಳು ಮಾಡಿಕೊಂಡರು. ನಾನು ಸಹ ಬಾಲಿವುಡ್ನಲ್ಲಿ ಇಂಥಹದೇ ಸನ್ನಿವೇಶಗಳನ್ನು ಎದುರಿಸಿದೆ ಎಂದಿದ್ದಾರೆ ಅನುರಾಗ್ ಕಶ್ಯಪ್.
‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಕೆಲವು ಅದ್ಭುತ ಸಿನಿಮಾಗಳನ್ನು ನೀಡಿರುವ ಅನುರಾಗ್ ಕಶ್ಯಪ್, ಕೆಲವಾರು ವರ್ಷಗಳಿಂದಲೂ ಬಾಲಿವುಡ್ ನ ಕೆಟ್ಟ ಸಿನಿಮಾ ಸಂಸ್ಕೃತಿ ಬಗ್ಗೆ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ತಾವು ಬಾಲಿವುಡ್ ಅನ್ನು ಬಿಡುತ್ತಿರುವುದಾಗಿ ಘೋಷಿಸಿದರು. ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಅನುರಾಗ್ ಹೇಳಿದರು. ಅದರಂತೆ ಅವರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಯೋಗರಾಜ್ ಭಟ್ ಅವರ ಜೊತೆಗೆ ಹೊಸ ಕೆಲಸವೊಂದಕ್ಕೆ ಅವರು ಕೈ ಹಾಕಿದ್ದಾರೆ.