ದರ್ಶನ್ ಜೈಲಿನಲ್ಲಿದ್ದಾಗ, ಪತ್ನಿ ವಿಜಯಲಕ್ಷ್ಮಿ ಮೌನಕ್ಕೆ ಶರಣು; ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ

ಬೆಂಗಳೂರು: ದರ್ಶನ್ (Darshan) ಜೈಲಿಗೆ ಹೋದಮೇಲೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಮೌನಕ್ಕೆ ಶರಣಾಗಿದ್ದು ಪೊಲೀಸರ ಕರೆಗಳನ್ನು ಸ್ವೀಕರಿಸುತ್ತಿಲ್ಲ.ಹೌದು. ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಮತ್ತು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಹೇಳಿಕೆ ಅಗತ್ಯ. ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಪೊಲೀಸರಿಂದ ನೋಟಿಸ್ ಜಾರಿಯಾಗಿತ್ತು. ಆದರೆ ಎರಡೂ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ವಿಜಯಲಕ್ಷ್ಮಿ ನಿರಾಸಕ್ತಿ ತೋರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಶ್ಲೀಲ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಚೆನ್ನಮ್ಮನಕೆರೆ ಪೊಲೀಸರು ಮೂರು ನೋಟಿಸ್ ನೀಡಿದ್ದರು. ಕೊನೆಗೆ ನೀವು ಇರುವ ಕಡೆಯೇ ಬಂದು ಹೇಳಿಕೆ ದಾಖಲಿಸುತ್ತೇವೆ ಎಂದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಹೇಳಿಕೆ ದಾಖಲಿಸದೇ ಇದ್ದರೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಕೆ ಮಾಡಲು ಚಿಂತನೆ ನಡೆಸಿದ್ದಾರೆ.
ಕಳ್ಳತನದ ಪ್ರಕರಣದಲ್ಲೂ ವಿಜಯಲಕ್ಷ್ಮಿ ಫುಲ್ ಸೈಲೆಂಟ್ ಆಗಿದ್ದಾರೆ. ಕಳ್ಳತನ ನಡೆದಿದೆ ತನಿಖೆ ನಡೆಸಿ ಎಂದಷ್ಟೇ ಹೇಳಿ ವಿಜಯಲಕ್ಷ್ಮಿ ಸುಮ್ಮನಿದ್ದಾರೆ. ನನಗೆ ಕೆಲಸ ಇದ್ದು ಮೈಸೂರಿನಲ್ಲಿ ಇರುತ್ತೇನೆ. ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿ ಪೊಲೀಸರ ಕರೆಯನ್ನು ಕಟ್ ಮಾಡಿದ್ದಾರೆ.
ಸದ್ಯ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜು ಹೇಳಿಕೆ ಮಾತ್ರ ದಾಖಲಾಗಿದೆ. ಪ್ರಕರಣ ಮುಂದುವರಿಯಬೇಕಾದರೆ ಸಾಕ್ಷ್ಯ ಸಂಗ್ರಹ, ಹೇಳಿಕೆ ದಾಖಲಿಸುವುದು ಅಗತ್ಯ. ಆದರೆ ವಿಜಯಲಕ್ಷ್ಮಿ ಕಡೆಯಿಂದ ಯಾವುದೇ ಹೇಳಿಕೆ ದಾಖಲಾಗದ ಕಾರಣ ಪ್ರಕರಣದಲ್ಲಿ ಪ್ರಗತಿ ಕಾಣದೇ ಪೊಲೀಸರು ಸುಮ್ಮನಿದ್ದಾರೆ.
ಸದ್ಯಕ್ಕೆ ಬೆಂಗಳೂರಿಗೆ ಬೈ ಹೇಳಿ ವಿಜಯಲಕ್ಷ್ಮಿ ಮೈಸೂರಿನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ದರ್ಶನ್ ವ್ಯವಹಾರವನ್ನು ನಿಭಾಯಿಸುತ್ತಿರುವ ವಿಜಯಲಕ್ಷ್ಮಿ ಮಗನ ಶಾಲಾ ವಿಚಾರವಾಗಿ ಮಾತ್ರ ಬೆಂಗಳೂರಿಗೆ ಬರುತ್ತಿರು ವಿಚಾರ ಈಗ ಲಭ್ಯವಾಗಿದೆ.
