72ರ ಹಿರಿಯನೊಂದಿಗೆ 27ರ ಉಕ್ರೇನ್ ಯುವತಿ ವಿವಾಹ; ಹಿಂದೂ ಸಂಪ್ರದಾಯದಂತೆ ಹಸೆಮಣೆ

ಸೆಲೆಬ್ರಿಟಿಗಳ ಮದುವೆ ಹಾಗೂ ರಾಜಮನೆತನದ ರೋಮಾಂಚಕ ಸಂಸ್ಕೃತಿಗೆ ಹೆಸರಾಗಿರುವ ರಾಜಸ್ಥಾನದ ಜೈಪುರದಲ್ಲಿ ಅಪರೂಪದ ಮದುವೆಯೊಂದು ನಡೆಯಿತು. 27ರ ಹರೆಯದ ಯುವತಿಯೊಬ್ಬಳು 72ರ ಹರೆಯದ ವೃದ್ಧನ ಕೈ ಹಿಡಿದು ಅಚ್ಚರಿ ಮೂಡಿಸಿದರು. ಉಕ್ರೇನ್ ಮೂಲದ ಈ ಜೋಡಿ ರಾಜಸ್ಥಾನದ ಜೋಧ್ಪುರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು. 72 ವರ್ಷದ ಸ್ಟಾನಿಸ್ಲಾವ್ ಹಾಗೂ 27 ವರ್ಷದ ಅನ್ಹೆಲಿನಾ ಹಿಂದೂ ಸಂಪ್ರದಾಯದಂತೆ ಮದುವೆ ಆದ ಉಕ್ರೇನ್ ಜೋಡಿ. ಈ ಜೋಡಿ 4 ವರ್ಷಗಳ ಕಾಲ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದು, ತಮ್ಮ ಈ ಸಂಬಂಧಕ್ಕೆ ಮದುವೆಯ ಮುದ್ರೆಯೊತ್ತಿದ್ದಾರೆ. ಈ ಜೋಡಿ ಉದಯ್ಪುರ ಅಥವಾ ಜೈಪುರದಲ್ಲಿ ಮದುವೆ ಆಗುವ ಬಗ್ಗೆ ಯೋಚನೆ ಮಾಡಿದರೂ ಕಡೆಗೆ ಜೋಧ್ಪುರದಲ್ಲಿ ಹಸೆಮಣೆಗೆ ಕಾಲಿರಿಸಿದ್ದಾರೆ.

ಜೋಧ್ಪುರದಲ್ಲಿ ಹಿಂದೂ ಸಂಪ್ರದಾಯದಂತೆ ಅದ್ಧೂರಿ ವಿವಾಹ
ಉಕ್ರೇನಿಯನ್ ಮೂಲದ ವಧು ಹಾಗೂ ವರ ತಮ್ಮ ಮದುವೆಯ ಈ ವಿಶೇಷ ದಿನದಂದು ಭಾರತೀಯ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ವರ ಶೇರ್ವಾನಿ ಹಾಗೂ ಪೇಟಾ ಧರಿಸಿದ್ದರೆ ವಧು ಸಂಪ್ರದಾಯಿಕ ಮಾರ್ವಾಡಿ ವಧು ಧರಿಸುವಂತಹ ಧಿರಿಸು ಧರಿಸಿದ್ದಾರೆ. ಜೋಧ್ಪುರದ ಹೊಟೇಲ್ನಲ್ಲಿ ನಡೆದ ಈ ಮದುವೆಯಲ್ಲಿ ವಧುವರರ ಸ್ನೇಹಿತರು ಪರಿಚಯಸ್ಥರು ಹಾಗೂ ಸ್ಥಳೀಯರು ಭಾಗಿಯಾಗಿ ಭಾರತೀಯ ಸಂಪ್ರದಾಯದಂತೆ ವಿವಾಹ ನಡೆಸಿಕೊಟ್ಟರು. ಹಳದಿ ಅಥವಾ ಅರಿಶಿಣ ಶಾಸ್ತ್ರದೊಂದಿಗೆ ಆರಂಭವಾದ ಮದುವೆಯ ಆಚರಣೆಗಳು ಸಂಜೆ ಮದುವೆಯ ದಿಬ್ಬಣ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯ್ತು.
ಭಾರತೀಯ ಧಿರಿಸಿನಲ್ಲಿ ಮಿಂಚಿದ ಉಕ್ರೇನ್ ಜೋಡಿ
ದಂಪತಿ ಸಪ್ತಪದಿ ತುಳಿಯುವುದಕ್ಕೂ ಮೊದಲು ಪುರೋಹಿತರು ಪಾಣಿಗ್ರಹಣ ಮತ್ತು ಹತ್ಲೆವಾ ಎಂಬ ಸಂಪ್ರದಾಯವೂ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಂಪ್ರದಾಯಿಕ ವಿಧಿವಿಧಾನಗಳನ್ನು ಈ ನವಜೋಡಿಯ ಕೈಯಲ್ಲಿ ಮಾಡಿಸಿದರು. ಈ ಮದುವೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರಿಗೆ ಇವರ ನಡುವಿನ ವಯಸ್ಸಿನ ಅಂತರ ಹುಬ್ಬೇರುವಂತೆ ಮಾಡಿದೆ. ಕೆಲವರು ಇವರು ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ. ಇನ್ನೂ ಕೆಲವರು ಇವರ ನಡುವಿನ ವಯಸ್ಸಿನ ಅಂತರ ನೋಡಿ ಶುಗರ್ ಡ್ಯಾಡಿ ಎಂದು ಚೇಡಿಸಿದ್ದಾರೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ:
ಇನ್ನೂ ಕೆಲವರು ಅಜ್ಜ ಹಾಗೂ ಮೊಮ್ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. ಆತನಿಗೆ ನೆಮ್ಮದಿ ಹಾಗೂ ಯೌವ್ವನ ಬೇಕು, ಆಕೆಗೆ ಆತನ ಹಣ ಬೇಕು ಹಾಗೆಯೇ ಆತನಿಗಿರುವ ದಿನಗಳು ಕಡಿಮೆ ಎಂಬುದರ ಅರಿವು ಆಕೆಗಿದೆ ಎಂದು ಕೆಲವರು ಟೀಕಿಸಿದ್ದಾರೆ. ವಯಸ್ಸು ದೊಡ್ಡ ವಿಷ್ಯ ಅಲ್ಲ ಹಣದ ವಿಷ್ಯ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇವರ ವಯಸ್ಸಿನ ಅಂತರದ ವಿಚಾರವೇ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
