ಶಸ್ತ್ರಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ 90 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಹೊರಕ್ಕೆ

ಕೊಡಾಡ: ಅಪರೂಪದ ಮತ್ತು ಅತ್ಯಂತ ಸವಾಲಿನ ವೈದ್ಯಕೀಯ ಚಿಕಿತ್ಸೆಯಲ್ಲಿ, ತೆಲಂಗಾಣದ ಕೊಡಾಡ ಪ್ರಾದೇಶಿಕ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಐದು ತಿಂಗಳು ಪ್ರಾಯದ ದೇಸಿ ತಳಿ ಹಸುವಿನ ಕರುವಿನ ಹೊಟ್ಟೆಯಿಂದ ಬರೋಬ್ಬರಿ 90 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಕೊಡಾಡ ಪಟ್ಟಣದ ರೈತರೊಬ್ಬರ ಹಸುವಿನ ಕರು ಹಲವು ದಿನಗಳಿಂದ ಅಸ್ವಸ್ಥವಾಗಿತ್ತು. ವಿವಿಧ ಔಷಧಿಗಳು ಮತ್ತು ಚಿಕಿತ್ಸೆಗಳನ್ನು ನೀಡಲಾಗಿದ್ದರೂ ಅದರ ಸ್ಥಿತಿ ಹದಗೆಟ್ಟಿತು. ನಂತರ ರೈತ ಹಸುವನ್ನು ಪ್ರಾದೇಶಿಕ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಡಾ. ಪೆಂಟಯ್ಯ ನೇತೃತ್ವದ ವೈದ್ಯಕೀಯ ತಂಡವು ಅದರ ಅನಾರೋಗ್ಯಕ್ಕೆ ಕಾರಣ ಜೈವಿಕ ವಿಘಟನೀಯವಲ್ಲದ ತ್ಯಾಜ್ಯ ಸೇವಿಸುವುದು ಎಂದು ತತ್ ಕ್ಷಣವೇ ಪತ್ತೆಹಚ್ಚಿದೆ.
ಡಾ. ಪೆಂಟಯ್ಯ ಮತ್ತು ಅವರ ತಂಡವು ಹಸುವಿಗೆ ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಐದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಒಂದೊಂದಾಗಿಯೇ ಹಾನಿಕಾರಕ ವಸ್ತುಗಳನ್ನು ಎಚ್ಚರಿಕೆಯಿಂದ ಹೊರತೆಗೆದು, ಅಂತಿಮವಾಗಿ ಹಸುವಿನ ಹೊಟ್ಟೆಯಿಂದ 90 ಕೆಜಿ ತೂಕದ ತ್ಯಾಜ್ಯವನ್ನು ಹೊರತೆಗೆದು ಪ್ರಾಣ ಉಳಿಸಿದ್ದಾರೆ.ಪಶುವೈದ್ಯಕೀಯ ಸಿಬಂದಿಯಯ ಮೇಲ್ವಿಚಾರಣೆಯಲ್ಲಿ ಹಸು ಈಗ ಚೇತರಿಸಿಕೊಳ್ಳುತ್ತಿದೆ.
ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳು ಪರಿಸರಕ್ಕೆ ಮಾತ್ರವಲ್ಲದೆ ಮುಗ್ಧ ಪ್ರಾಣಿಗಳಿಗೂ ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಎಚ್ಚರಿಸುತ್ತದೆ.
