ದಸರಾ ಆನೆಗಳ ಫೋಟೊ ಶೂಟ್: ‘ರೀಲ್ಸ್’ ಮಾಡುವ ಯುವತಿಯರಿಗೆ ನಿಯಮ ಇಲ್ಲವೇ? ಅರಣ್ಯ ಇಲಾಖೆಯ ನಡೆಯ ಬಗ್ಗೆ ಆಕ್ರೋಶ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dasara) ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮೈಸೂರಿನಲ್ಲಿ ಆನೆಗಳಿಗೆ ಜಂಬೂಸವಾರಿಯ ತರಬೇತಿಯನ್ನೂ ನೀಡಲಾಗುತ್ತಿದೆ. ಇದೇ ವೇಳೆ ಅರಣ್ಯ ಇಲಾಖೆಯ ವಿರುದ್ದ ಗಂಭೀರ ಆರೋಪ ಕೇಳಿಬಂದಿದ್ದು, ರೀಲ್ಸ್ ಮಾಡುವ ಶೋಕಿಯುಳ್ಳುವರು ಹಾಗೂ ಪ್ರಭಾವಿಗಳಿಗೆ ಮಣಿದು ಪ್ರಾಣಿಗಳ ಬಳಿ ಹುಚ್ಚಾಟ ನಡೆಸಲು ಬೇಕಾಬಿಟ್ಟಿ ಅನುಮತಿ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.

ದಸರಾ ಆನೆಗಳ ಮುಂದೆ ರಾತ್ರಿ ಫೋಟೊ ಶೂಟ್ ಮಾಡಿಸಿಕೊಂಡಿರುವ ಕೃತಿ ಎ ಕೆ. ಎಂಬ ಯುವತಿಯ ಫೋಟೋ ಎಲ್ಲೆಡೆ ಹರಿದಾಡಿದೆ . ಈ ಬೆನ್ನಲ್ಲೇ ಇದಕ್ಕೆ ಯಾರು ಅನುಮತಿ ಕೊಟ್ಟರು? ಚಿಲ್ಲರೆ ಲಂಚದ ಆಸೆಗೆ ಅರಣ್ಯಾಧಿಕಾರಿಗಳೇ ತುತ್ತಾದರೆ ಅಥವಾ ಯುವತಿಯರ ಚೆಂದಕ್ಕೆ ಮನಸೋತು ಈ ರೀತಿ ಅವಕಾಶ ನೀಡಿದರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನಸಾಮಾನ್ಯರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯವೇ ಎಂದು ಜನರು ಕಿಡಿಕಾರಿದ್ದಾರೆ.
ಎರಡು ವರ್ಷಗಳ ಹಿಂದೆ ಹಗಲು ವೇಳೆಯಲ್ಲೇ ಪ್ಲಾಷ್ ಹಾಕಿ ಯೂಟ್ಯೂಬರ್ ಒಬ್ಬ ಫೋಟೋ ತೆಗೆದಿದ್ದ. ಈ ವೇಳೆ ಅಂಬಾರಿ ಕಟ್ಟುವಾಗ ಪ್ಲಾಷ್ ಲೈಟ್ ನಿಂದಲೇ ಆನೆ ಬೆಚ್ಚಿ ಬಿದ್ದಿತ್ತಷ್ಟೇ ಅಲ್ಲದೇ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿತ್ತು. ಅಂದಿನಿಂದ ಆನೆಗಳೊಂದಿಗೆ ಫೋಟೋ ಶೂಟ್ ನಿಷೇಧಿಸಲಾಗಿತ್ತು.
ಆದರೆ ಈಗ ಕೃತಿ ಫೋಟೋ ತೆಗೆಸಿಕೊಂಡುರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆಯ ನಡೆಯ ಬಗ್ಗೆ ಜನರು ಕಿಡಿಕಾರಿದ್ದಾರೆ.
ದಸರಾ ಆನೆಗಳನ್ನು ತಬ್ಬಿಕೊಂಡು ಫೋಟೊ ಶೂಟ್ ಮಾಡಿಸಿಕೊಂಡ ಕೃತಿ ಎ ಕ ಫೋಟೋ ಉಲ್ಲೇಖಿಸಿ, ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ರಾತ್ರಿ ವೇಳೆ ಯಾರು ಹೋಗುವಂತಿಲ್ಲ, ಆದರೂ ಫ್ಲಾಶ್ ಲೈಟ್ ಗಳನ್ನು ಬಳಸಿಕೊಂಡು ಫೋಟೊ ಶೂಟ್ ಮಾಡಿದ್ದು ಹೇಗೆ ಎಂದು ಜನರು ಪ್ರಶ್ನಿಸಿದ್ದಾರೆ. ಸುಮಾರು 55 ಸೆಕೆಂಡ್ ಇರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಕರಿಕಲ್ಲುತೊಟ್ಟಿ ಮೂಲಕ ಅರಮನೆ ಆವರಣಕ್ಕೆ ಎರಡು ಕಾರುಗಳಲ್ಲಿ ಪ್ರವೇಶ ಪಡೆದಿರುವ ಕೃತಿ ಎ ಕೆ ನಂತರ ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಹೋಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಅನುಮತಿ ಕೊಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.