ಹಳೆಯ ದ್ವೇಷಕ್ಕೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ

ಕಲಬುರಗಿ: ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕ್ರೂರ ಹತ್ಯೆ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ. ಇದು ಸಾಮಾನ್ಯ ಪ್ರೀತಿ ಪ್ರೇಮದ ದ್ವೇಷಕ್ಕೆ ನಡೆದ ಹತ್ಯೆಯ ಕಥೆಯಲ್ಲ, ಬದಲಿಗೆ ಕಾರ್ಖಾನೆ ಕಾರ್ಮಿಕ ಮತ್ತು ಮಾಲೀಕನ ನಡುವಿನ ವೈಮನಸ್ಸು, ಹಳೆಯ ದ್ವೇಷದ ಪ್ರತೀಕಾರವೇ ಹೆಣ್ಣುಮಗಳೊಬ್ಬಳ ಬರ್ಬರ ಹತ್ಯೆಗೆ ಕಾರಣ ಎಂಬುದು ಈಗ ಹೊರಬರುತ್ತಿರುವ ವಿಚಾರ.

ಆತ್ಮಹತ್ಯೆಯಿಂದ ಆರಂಭವಾದ ವೈಷಮ್ಯ
ಕೆಲವು ವಾರಗಳ ಹಿಂದೆ ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ ಎಂಬ ಯುವಕ, ನೌಕರಿ ತಪ್ಪಿದ ಕಾರಣದಿಂದ ಮನನೊಂದು ನೇಣಿಗೆ ಶರಣಾಗಿದ್ದ. ಈ ಘಟನೆಯಲ್ಲಿ, ಕಾರ್ಮಿಕ ಸಂಘದ ಅಧ್ಯಕ್ಷ ಚನ್ನವೀರಪ್ಪ ಸುಲಹಳ್ಳಿ ಕಾರಣ ಎಂದು ವಿನೋದನ ಕುಟುಂಬ ಆರೋಪ ಮಾಡಿತ್ತು. “ನಮ್ಮ ಮಗನ ಆತ್ಮಹ*ತ್ಯೆಗೆ ಚನ್ನವೀರಪ್ಪನೇ ಹೊಣೆಗಾರ” ಎಂದು ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿನೋದನ ಕುಟುಂಬ, ಮಳಖೇಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿತ್ತು. ಅಲ್ಲದೇ ಗ್ರಾಮದಲ್ಲಿ ಪಂಚಾಯಿತಿಯೂ ನಡೆದಿತ್ತು. ಆದರೆ ಕುಟುಂಬದ ಆಕ್ರೋಶ ತಣ್ಣಗಾಗದೆ, ಕೊನೆಗೆ ಕ್ರೂರ ಹ*ತ್ಯೆಗೆ ದಾರಿ ಮಾಡಿಕೊಟ್ಟಿದೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ.
ತಂದೆಗೆ ಗುರಿ ಬಲಿಯಾದ ಮಗಳು
ಚನ್ನವೀರಪ್ಪನ ಹತ್ಯೆಗೆ ಹೊಂಚು ಹಾಕಿದ ಆರೋಪಿಗಳು, ಆತ ಸಿಗದ ಕಾರಣ ಆತನ ಮಗಳನ್ನು ಗುರಿಯಾಗಿಸಿದ್ದಾರೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ, ಅಪ್ಪನ ಸಂಘಟನಾ ಕೆಲಸಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಭಾಗ್ಯಶ್ರೀ ಸುಲಹಳ್ಳಿ (21) ಈ ದುಷ್ಕೃತ್ಯಕ್ಕೆ ಬಲಿಯಾದಳು. ಸೆಪ್ಟೆಂಬರ್ 11ರಂದು ಆಕೆ ಏಕಾಏಕಿ ನಾಪತ್ತೆಯಾಗಿದ್ದು, ನಂತರ ಕಾರ್ಖಾನೆಯ ನಿರ್ಜನ ಪ್ರದೇಶದಲ್ಲಿ ಆಕೆಯ ಶವ ಕೊಲೆಯಾದ ರೀತಿ ಪತ್ತೆಯಾಗಿತ್ತು. ಶವ ಪತ್ತೆಯಾದಾಗ ಅದು ಏಳು ದಿನಗಳ ಕಾಲ ಕೊಳೆತ ಸ್ಥಿತಿಯಲ್ಲಿ ಇತ್ತು.
ಹತ್ಯೆಯ ಕ್ರೂರ ವಿಧಾನ
ಆರಂಭದಲ್ಲಿ ಭಾಗ್ಯಶ್ರೀಯನ್ನು ಕತ್ತು ಬಿಗಿದು ಉಸಿರುಗಟ್ಟಿಸಿ ಕೊಂದರೆಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹ8ತ್ಯೆ ನಡೆಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮಳಖೇಡ ಪೊಲೀಸರು ವಿನೋದನ ಸಹೋದರ ಮಂಜುನಾಥ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಮಂಜುನಾಥನ ತಂದೆ, ದೊಡ್ಡಪ್ಪ, ಮತ್ತೊಬ್ಬ ಸಹೋದರ ಕೂಡ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಮಂಜುನಾಥನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಉಳಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸ್ನೇಹವೇ ಸಾವಾಗಿ ಮಾರ್ಪಾಡು?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾಗ್ಯಶ್ರೀ ಹಾಗೂ ಮಂಜುನಾಥರ ನಡುವೆ ಸ್ನೇಹ ಇದ್ದದ್ದರಿಂದ ಆಕೆ ಸಲುಗೆಯಿಂದ ಮಾತನಾಡುತ್ತಿದ್ದಳು. ಆದರೆ ಅದೇ ಸ್ನೇಹವೇ ಜೀವಕ್ಕೆ ಸಂಚಕಾರ ತಂದಿದೆ. ಕೊನೆಗೆ ಇದುವೇ ಕ್ರೂರ ಹತ್ಯೆಗೆ ಕಾರಣವಾಯಿತೇ ಎಂಬುದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಹಳೆಯ ವೈಷಮ್ಯ, ಕಾರ್ಮಿಕ ಸಂಘದ ಒಳಗಲಾಟೆ, ಹಾಗೂ ವೈಯಕ್ತಿಕ ದ್ವೇಷ ಈ ಎಲ್ಲ ಹಂತಗಳನ್ನೂ ಪರಿಶೀಲಿಸುತ್ತಿದ್ದಾರೆ.
