ಮಂಗಳೂರು: ನಕಲಿ ಕಂಪನಿ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ, ಮೂವರ ಬಂಧನ

ಮಂಗಳೂರು : ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಅದರ ಹೆಸರಿನಲ್ಲಿ ಕಂಪೆನಿಗಳನ್ನು ನಿರ್ಮಿಸಿ ಸ್ಟೇಟ್ ಬ್ಯಾಂಕ್ ನಿಂದ ಕೋಟಿಗಟ್ಟಲೆ ಲೋನ್ ತೆಗೆದು ಅದನ್ನು ಸ್ವಂತಕ್ಕೆ ಬಳಸಿದ ವಂಚನೆ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮುನೀರ್ ಕದಮನ್ ಅಬೂಬಕರ್ (53) , ಹುಸೇನ್. ಪಿ (52) , ಮೊಹಮ್ಮದ್ ಮುಸ್ತಾಫ (27) ಎಂದು ಗುರುತಿಸಲಾಗಿದೆ.

ಆರೋಪಿಗಳು ಕಂಪನಿ ತೆರೆದು ಸುಳ್ಳು ದಾಖಲಾತಿ ಸೃಷ್ಟಿಸಿ ಲೋನ್ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ಕೋಟಿಗಟ್ಟಲೆ ಲೋನ್ ಪಡೆದಿದ್ದಾರೆ. ಬಳಿಕ ಬ್ಯಾಂಕ್ ಅಧಿಕಾರಿಗಳ ಶಾಮೀಲಿನೊಂದಿಗೆ ಆರೋಪಿಗಳು ಪಡೆದ ಲೋನ್ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ಸ್ವಂತಕ್ಕೆ ಬಳಸಿದ್ದಾರೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯ ಬ್ಯಾಂಕಿನಿಂದ MSME ಯೋಜನೆಯಡಿಯಲ್ಲಿ M/s Electro World Enterprises ಸಂಸ್ಥೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1 ಕೋಟಿ 20 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿ, ಅದೇ ರೀತಿ M/s M H Enterprises ಸಂಸ್ಥೆರವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸುಮಾರು 1 ಕೋಟಿ 30 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿಕೊಂಡಿದೆ. ಈ ಎರಡು ಕಂಪೆನಿಗಳ ತಾವು ಪಡೆದುಕೊಂಡಿದ್ದ ಲೋನ್ ಹಣವನ್ನು ಬ್ಯಾಂಕ್ ಅಧಿಕಾರಿಗಳ ಶಾಮೀಲಿನೊಂದಿಗೆ ಉದ್ದೇಶಿತ ವ್ಯವಹಾರಕ್ಕೆ ಬಳಸದೇ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿಕೊಂಡು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ.
ಈ ಕುರಿತಂತೆ 16-09-2025 ರಂದು ಚೀಪ್ ಮಾನ್ಯೇಜರ್, ಎಸ್.ಬಿ.ಐ ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆಯಲ್ಲಿ ಅ.ಕ್ರ 130/2025 ಮತ್ತು 131/2025 ಕಲಂ. 316(2), 316(5), 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ರಂತೆ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು M/s Electro World Enterprises ಸಂಸ್ಥೆಯ ವಂಚನೆಯ ಪ್ರಮುಖ ಆರೋಪಿ ಮುನೀರ್ ಕದಮನ್ ಅಬೂಬಕರ್ ಮತ್ತು ಆತನಿಗೆ ಸಹಕರಿಸಿದ ಹುಸೇನ್. ಪಿ ಎಂಬುವವರನ್ನು ಪತ್ತೆ ಮಾಡಲಾಗಿದ್ದು, ಇನ್ನೊಂದು ಪ್ರಕರಣದಲ್ಲಿ M/s M H Enterprises ಸಂಸ್ಥೆಯ ಮಾಲೀಕ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಮುಸ್ತಾಫ ಎಂಬಾತನನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಕೈಗೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಮುನೀರ್ ಕದಮನ್ ಅಬೂಬಕರ್ ಎಂಬಾತನು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ತಿಳಿದುಬಂದಿರುತ್ತದೆ. ಎರಡು ಪ್ರಕರಣಗಳನ್ನು ಮುಂದಿನ ತನಿಖೆಯ ಬಗ್ಗೆ ಸಿಸಿಬಿ ಮಂಗಳೂರು ಘಟಕಕ್ಕೆ ವರ್ಗಾಹಿಸಲಾಗಿದೆ.
