15 ದಿನದ ಹೆಣ್ಣು ಶಿಶು ಜೀವಂತ ಸಮಾಧಿ – ಅದ್ಭುತ ತಪ್ಪಿಸಿಕೊಂಡಿದ್ದು ಹೇಗೆ?

ಲಕ್ನೋ: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ 15 ದಿನಗಳ ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಿರುವ ಮನಕಲಕುವ ಘಟನೆ ಶಹಜಹಾನ್ಪುರದಲ್ಲಿ ನಡೆದಿದೆ. ಜಿಲ್ಲೆಯ ಜೈತಿಪುರ ಪ್ರದೇಶದ ಗೋದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಹಗುಲ್ ನದಿಯ ಸೇತುವೆಯ ಬಳಿಯ ಕೆಲವು ಸಣ್ಣ ಮರಗಳ ನಡುವೆ ಶಿಶುವನ್ನು ನೆಲದಲ್ಲಿ ಹೂಳಲಾಗಿತ್ತು.

ಕುರಿಗಾಹಿಯೊಬ್ಬ ಶಿಶುವಿನ ಅಳುವ ಧ್ವನಿಯನ್ನು ಕೇಳಿ ಅಲ್ಲಿಗೆ ಓಡಿ ಬಂದಿದ್ದರು. ನಂತರ ಅವರು ಮಗುವಿನ ಒಂದು ಕೈ ಮಣ್ಣಿನಿಂದ ಹೊರಗೆ ಇರುವುದನ್ನು ಗಮನಿಸಿದ್ದಾರೆ. ಇದಾದ ನಂತರ, ಅವರು ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡಿದರು. ಸುತ್ತಮುತ್ತಲಿನ ಜನರು ಅಲ್ಲಿಗೆ ತಲುಪಿದಾಗ, ಅವರು ಕೂಡ ಮಗುವನ್ನು ನೋಡಿದ್ದಾರೆ. ನಂತರ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದರು. ಪೊಲೀಸರು ಬಹಳ ಎಚ್ಚರಿಕೆಯಿಂದ ಮಣ್ಣನ್ನು ತೆಗೆದು ಶಿಶುವನ್ನು ಭೂಮಿಯೊಳಗಿಂದ ಹೊರತೆಗೆದರು. ಆಗ ಮಗು ಸಣ್ಣದಾಗಿ ಉಸಿರಾಡುತ್ತಿತ್ತು. ತಕ್ಷಣ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಂತರ, ಉತ್ತಮ ಚಿಕಿತ್ಸೆಗಾಗಿ ಶಿಶುವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಕುಮಾರ್ ಮಾತನಾಡಿ, ಮಗುವಿಗೆ 10 ರಿಂದ 15 ದಿನಗಳಾಗಿದ್ದು , ತುಂಬಾ ದುರ್ಬಲವಾಗಿದೆ. ಮಗುವಿನ ದೇಹದ ಮೇಲೆ ಇರುವೆ ಕಚ್ಚಿದ ಗಾಯಗಳಿದ್ದು, ಆಕೆಗೆ ಸಾಕಷ್ಟು ರಕ್ತ ಹೋಗಿದೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಶಿಶುವಿನ ಬೆರಳುಗಳು ಒಂದಕ್ಕೊಂದು ಸೇರಿಕೊಂಡಿರುವುದು ಕಂಡುಬಂದಿದೆ. ಪೊಲೀಸರು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಬಹಗುಲ್ ನದಿ ರಸ್ತೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಜೈತ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಗೌರವ್ ತ್ಯಾಗಿ ಹೇಳಿದ್ದಾರೆ.
ಈ ಅಮಾನವೀಯ ಕೃತ್ಯವನ್ನು ಯಾರು ಮಾಡಿದ್ದಾರೆಂದು ತಿಳಿಯುವ ಸಲುವಾಗಿ ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಶಿಶು ಇನ್ನೂ ಉಸಿರಾಡುತ್ತಿರುವುದಕ್ಕೆ ಜನರು ದೇವರಿಗೆ ಧನ್ಯವಾದ ಹೇಳಿದ್ದಾರೆ.
