ಬೆಂಗಳೂರಿನಲ್ಲಿ ಹೇಯ ಕೃತ್ಯ: ನಾಯಿ ರಕ್ಷಣೆಗೆ ಬಂದ ಯುವತಿಗೆ ಅಸಭ್ಯ ವರ್ತನೆ, ಧೈರ್ಯದಿಂದ ಆರೋಪಿಯನ್ನು ಹಿಡಿದು ಕೊಟ್ಟ ಮಹಿಳೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಇದೀಗ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಬೀದಿ ನಾಯಿಯೊಂದು ಗಾಯಗೊಂಡು ರಸ್ತೆ ಮಧ್ಯೆ ನರಳುತ್ತಿತ್ತು. ಮಾನವೀಯ ಗುಣವುಳ್ಳ ಹೆಣ್ಣು ಮಗಳೊಬ್ಬಳು ಅದನ್ನು ಕಾಪಾಡಲು ಮುಂದಾದಳು.

ಅದಾಗಲೇ ಮಧ್ಯರಾತ್ರಿ ಸಮೀಪಿಸಿತ್ತು. ಕಾರಿನಿಂದ ಇಳಿದ ಯವತಿ ನಾಯಿಯನ್ನು ರಕ್ಷಿಸಲು ಮುಂದಾದಳು. ಅದಾಗ ಅದೇ ದಾರಿಯಲ್ಲಿ ಬಂದ ಇಂಜಿನಿಯರ್ ಪದವೀದರನೊಬ್ಬ, ಹೇಯ ಕೃತ್ಯ ಮಾಡಿದ್ದಾನೆ. ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಮುಂದೆ ಸಾಗಿದ್ದಾನೆ. ಮತ್ತೆ ಕೆಲ ನಿಮಿಷಗಳ ನಂತರ ಬಂದು ಮತ್ತೊಮ್ಮೆ ಅದೇ ರೀತಿ ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾಗಿದ್ದಾನೆ. ಎಚ್ಚೆತ್ತ ಯುವತಿ ತನ್ನ ಸ್ನೇಹಿತರ ಜೊತೆಗೆ ಆತನ ಬೈಕ್ ಅನ್ನು ಫಾಲೋ ಮಾಡಿದ್ದಾಳೆ. ಭಯಗೊಂಡ ಆತ ಬೈಕ್ ನಿಂದ ಬಿದ್ದಿದ್ದು ಬಳಿಕ ಪೊಲೀಸ್ ಎಮರ್ಜೆನ್ಸಿ ನಂಬರ್ ಗೆ ಕರೆ ಮಾಡಿ ತಿಳಿಸಿ ಆರೋಪಿಯನ್ನು ಹಿಡಿದು ಕೊಡಲಾಗಿದೆ. ಹೇಳಿ ಕೇಳಿ ಆತನೊಬ್ಬ ಇಂಜಿನಿಯರ್ , ಓದಿ ತಿಳಿದುಕೊಂಡವನೇ ಇಂತಹ ಹೇಯ ಕೃತ್ಯ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಆದರೂ ಆಕೆ ಧೈರ್ಯಗೆಡದೆ ಆತನನ್ನು ಹಿಂಬಾಲಿಸಿ ಪೊಲೀಸರಿಗೆ ಹಿಡಿದುಕೊಟ್ಟಿದ್ದು ಮಾತ್ರ ಅನೇಕ ಹೆಣ್ಣು ಮಕ್ಕಳಿಗೆ ಮಾದರಿ.
ಘಟನೆ ಹಿನ್ನೆಲೆ ಏನು?
ಈ ಘಟನೆಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಸಭ್ಯ ಕೃತ್ಯ. ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 7ರ ರಾತ್ರಿ 11.50ರ ಸುಮಾರಿಗೆ ಜಕ್ಕೂರು ಮುಖ್ಯರಸ್ತೆಯಲ್ಲಿ ನಡೆದ ಈ ಘಟನೆ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಆತಂಕ ಮೂಡಿಸಿದೆ. ಸ್ನೇಹಿತರೊಂದಿಗೆ ಕಾರಿನಲ್ಲಿ ಭಾರತಿ ಸಿಟಿ ಕಡೆಗೆ ತೆರಳುತ್ತಿದ್ದ ಯುವತಿ, ಜಕ್ಕೂರು ಡಬಲ್ ರೋಡ್ ಬಳಿ ಕಾರು ನಿಲ್ಲಿಸಿದರು. ಅಲ್ಲಿ ರಸ್ತೆ ಮಧ್ಯೆ ಗಾಯಗೊಂಡು ಬಿದ್ದಿದ್ದ ನಾಯಿಯನ್ನು ಕಂಡು, ಅದನ್ನು ರಕ್ಷಿಸಲು ಯುವತಿ ಮುಂದಾದರು. ನಾಯಿಯನ್ನು ಎತ್ತಿಕೊಂಡು ರಸ್ತೆ ದಾಟುತ್ತಿದ್ದ ವೇಳೆ, ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬನು ಆಕೆಯ ಖಾಸಗಿ ಅಂಗ ಮುಟ್ಟಿ ಪರಾರಿಯಾದ.
ನಂತರ ಯುವತಿ ನಾಯಿಯನ್ನು ಫುಟ್‌ಪಾತ್ ಮೇಲೆ ಬಿಟ್ಟು ಹತ್ತಿರದ ಪೆಟ್ರೋಲ್ ಬಂಕ್ ಬಳಿ ಕೈ ತೊಳೆಯಲು ಹೋದರು. ಈ ವೇಳೆ ಅದೇ ವ್ಯಕ್ತಿ ಮರಳಿ ಬಂದು ಮತ್ತೊಮ್ಮೆ ಅಸಭ್ಯ ವರ್ತನೆ ತೋರಿದ. ಎರಡು ಬಾರಿ “ಬ್ಯಾಡ್ ಟಚ್” ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ.
ಯುವತಿ ಧೈರ್ಯ – ಆರೋಪಿಗೆ ಪಾಠ
ಆದರೆ ಈ ಬಾರಿ ಯುವತಿ ಹಾಗೂ ಆಕೆಯ ಸ್ನೇಹಿತರು ಕಾಮುಕನ ಬೆನ್ನುಹತ್ತಿ ಹೋದರು. ಓಡಿಹೋಗುವಾಗ ಆರೋಪಿ ಮಂಜುನಾಥ್ ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದು ಬಿದ್ದಿದ್ದರಿಂದ ಸ್ಥಳದಲ್ಲೇ ಸಿಕ್ಕಿಬಿದ್ದರು. ತಕ್ಷಣವೇ ಯುವತಿ ಮತ್ತು ಸ್ನೇಹಿತರು 112ಕ್ಕೆ ಕರೆ ಮಾಡಿ, ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದರು.
ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದರು. ಆರೋಪಿ ಮಂಜುನಾಥ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಈಗ ಪೊಲೀಸ್ ಠಾಣೆಯಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಪೊಲೀಸರು ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಶೂನ್ಯ ಸಹಿಷ್ಣುತೆಯನ್ನು ಅನುಸರಿಸುತ್ತಿದ್ದು, ಇಂತಹ ಕೃತ್ಯಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಲಾಗುವುದೆಂದು ತಿಳಿಸಿದ್ದಾರೆ.
