ರಸ್ತೆ ಮಧ್ಯೆ ಮರದ ದಿಮ್ಮಿಗಳ ಲಾರಿ ಪಲ್ಟಿ, ವಾಹನ ಸಂಚಾರಕ್ಕೆ ಅಡಚಣೆ

ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮರದ ದಿಮ್ಮಿಗಳನ್ನು ಹೊತ್ತ ಲಾರಿ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಎಕ್ಕೂರು ಬಳಿ ಇಳಿಜಾರು ರಸ್ತೆಯಲ್ಲಿ ಲಾರಿ ಮಗುಚಿ ಬಿದ್ದಿದೆ.ಅಪಘಾತದ ವೇಳೆ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಲಾಯಿಸುತ್ತಿದ್ದ. ಇದರಿಂದಾಗಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಲಾರಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಮರದ ದಿಮ್ಮಿಗಳು ರಸ್ತೆ ತುಂಬಾ ಹರಡಿದೆ. ಇದರಿಂದಾಗಿ ವಾಹನ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸಂಚಾರ ನಿಯಂತ್ರಣ ಸಿಬ್ಬಂದಿ ವಾಹನವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು
