Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾಸನ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಟ್ರಕ್ ನುಗ್ಗಿ ಭೀಕರ ದುರಂತ, 9 ಜನರ ಸಾವು

Spread the love

ಹಾಸನ: ಗಣೇಶ ವಿಸರ್ಜನೆ ಸಂಭ್ರಮದಲ್ಲಿದ್ದವರ ಮೇಲೆ ರಕ್ಕಸನಂತೆ ನುಗ್ಗಿದ್ದ ಟ್ರಕ್​​ ವಿದ್ಯಾರ್ಥಿಗಳು ಸೇರಿ 9 ಜನರನ್ನು ಬಲಿ  ಪಡೆದಿದೆ. ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ (Young boys) ಹೆಚ್ಚು. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿದೆ. ಮಕ್ಕಳ ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿ ಒಡೆದಿದೆ. ಮೃತಪಟ್ಟ ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆಯಾಗಿದೆ.

ಕುಟುಂಬದವರ ಆಕ್ರಂದನ

17, 19, 23, 25 ವರ್ಷ ಸಾಯೋ ವಯಸ್ಸಂತು ಅಲ್ವೇ ಅಲ್ಲ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮನೆಗೆ ಆಧಾರವಾಗಬೇಕಿದ್ದರು. ಆದರೆ ಶುಕ್ರವಾರ ರಾತ್ರಿ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೂಸಳೆ ಹೊಸಳ್ಳಿ ಬಳಿ ಸಂಭವಿಸಿದ ದುರಂತ ಹಲವು ಯುವಕರ ಬದುಕನ್ನೇ ಅಂತ್ಯಗೊಳಿಸಿದೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹುಟ್ಟು ಹಬ್ಬದ ದಿನವೇ ದುರಂತ ಸಾವನ್ನಪ್ಪಿದ ಯುವಕ

ಮೃಥ ಮಿಥುನ್, ವಯಸ್ಸು ಇನ್ನು 22 ವರ್ಷ ಅಷ್ಟೇ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವನು. ಹೊಳೆನರಸೀಪುರದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ರಾತ್ರಿಯಷ್ಟೇ ತನ್ನ ಬರ್ತಡೇ ಆಚರಿಸಿಕೊಂಡಿದ್ದ. ಸ್ನೇಹಿತರು ಕೇಕ್‌ಕಟ್‌ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಬರ್ತ್‌ಡೇ ಸಂಭ್ರಮದಲ್ಲೇ ಮೂಳೆಹಸಹಳ್ಳಿಯ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆಹಾಕಲು ತೆರಳಿದ್ದ. ಆದರೆ ಯಮಧರ್ಮನಂತೆ ನುಗ್ಗಿಬಂದ ಟ್ರಕ್ ಈತನ ಜೀವವನ್ನೇ ತೆಗೆದಿದೆ. ಈತನ ಪಾಲಿಗೆ ಹುಟ್ಟಿದ ಹಬ್ಬದ ದಿನವೇ ಡೆತ್‌ಡೇ ಆಗಿಬಿಟ್ಟಿದೆ.

‘ಹಬ್ಬ’ ಅಂತಾ ಹೋದ ಮಗ ಬದುಕಿಲ್ಲ: ಅಪ್ಪನ ಗೋಳಾಟ

ಯುವಕ ಮಿಥುನ್‌ದು ಒಂದು ಕಥೆಯಾದರೆ, 17 ವರ್ಷದ ಈಶ್ವರ ಅನ್ನೋ ಹುಡುಗನದ್ದು ಮತ್ತೊಂದು ಕಥೆ. ಹೊಳೆನರಸೀಪುರದ ಢಣಾಯಕನಹಳ್ಳಿ ಗ್ರಾಮದ ಈತ ಹಾಸನದ ಪ್ರೈವೇಟ್‌ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ.

ನಿನ್ನೆ ಇವರ ಊರಲ್ಲಿ ಹಬ್ಬ ಇತ್ತು. ಮಗನಿಗೆ ಫೋನ್ ಮಾಡಿದ್ದ ಅಪ್ಪ ಹಬ್ಬಕ್ಕೆ ಮನೆಗೆ ಬಾ ಅಂತಾ ಕರೆದಿದ್ದರು. ಆದರೆ ಮಿಥುನ್‌ ಆರ್ಕೆಸ್ಟ್ರಾ ಇದೆ. ಗಣೇಶ ಮೆರವಣಿಗೆ ನೋಡ್ಕೊಂಡು ಬರ್ತೀನಿ ಅಂತೇಳಿದ್ದ. ವಿಧಿಯಾಟಕ್ಕೆ ಈತನೂ ಟ್ರಕ್‌ ಹರಿದು ಬಲಿಯಾಗಿದ್ದಾನೆ. ಮನೆಗೆ ಬರ್ತೀನಿ ಅಂದಿದ್ದ ಮಗ ಈಗ ಬದುಕಿಲ್ಲ ಅಂತಾ ತಂದೆ ರವಿ ಅವರು ಗೋಳಾಡಿದ್ದಾರೆ.

ಇನ್ನು ಟ್ರಕ್ ಹರಿದು ಕಬ್ಬಿನಹಳ್ಳಿ ಗ್ರಾಮದ 25 ವರ್ಷದ ಕುಮಾರ್ ಮತ್ತು 25 ವರ್ಷದ ಪ್ರವೀಣ್ ಅನ್ನೋರು ಕೊನೆಯುಸಿರೆಳೆದಿದ್ದಾರೆ. ಆರ್ಕೆಸ್ಟ್ರಾ ನೋಡಿ, ಗಣೇಶವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಇವರಿಬ್ಬರು ದುರಂತ ಅಂತ್ಯಕಂಡಿದ್ದಾರೆ.

ಮೃತರಲ್ಲಿ ‌6 ಜನ ಸ್ಥಳೀಯರು: ಮೂವರು ವಿದ್ಯಾರ್ಥಿಗಳು

ಈವರೆಗೆ ದುರಂತದಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ಪೈಕಿ 6 ಜನ ಸ್ಥಳೀಯರು, ಮೂವರು ವಿದ್ಯಾರ್ಥಿಗಳಾಗಿದ್ದಾರೆ. ಹಾಸನದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚಿಕ್ಕಮಗಳೂರು ಜಿಲ್ಲೆ ಮರ್ಲೆಯ ಮಾಣೇಹಳ್ಳಿಯ ಸುರೇಶ್, ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಿಥುನ್, ಅಂತಿಮ ಬಿಇ ಓದುತ್ತಿದ್ದ ಬಳ್ಳಾರಿಯ ಪ್ರವೀಣ್ ಕುಮಾರ್ ಮೃತಪಟ್ಟಿದ್ದಾರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ಪೋಷಕರ ರೋದನ ಕರುಳು ಕಿವುಚುವಂತಿದೆ.

ಪೊಲೀಸರ ನಿರ್ಲಕ್ಷ್ಯ: ಸ್ಥಳೀಯರ ಆಕ್ರೋಶ

ಇನ್ನು ದುರಂತಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಇದಕ್ಕೆಲ್ಲ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅಂತೇಳಿದ್ದಾರೆ. ಹಾಸನ ಸಂಸದ ಶ್ರೇಯಸ್‌ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ, ಈ ಅಪಘಾತದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ.

5 ಲಕ್ಷ ರೂ ಪರಿಹಾರ ಘೋಷಣೆ!

ಗಣೇಶ ವಿಸರ್ಜನೆ ವೇಳೆ ಟ್ರಕ್ ಹರಿದು ಸಂಭವಿಸಿದ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಅಂತಾ ಮರುಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್​​, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಯತ್ನಾಳ್, ಪ್ರತಾಪ್ ಸಿಂಹ ಸೇರಿ ಹಲವು ನಾಯಕರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದು, ರಾಜ್ಯಸರ್ಕಾರ ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸೆಗೆ ನೆರವಾಗಬೇಕು ಅಂತಾ ಆಗ್ರಹಿಸಿದ್ದಾರೆ.

ಅದೇನೆ ಇರಲಿ ಟ್ರಕ್ ಚಾಲಕನ ನಿರ್ಲಕ್ಷ್ಯ 9 ಜೀವಗಳನ್ನು ಬಲಿಪಡೆದಿದೆ. ಗಣೇಶ ವಿಸರ್ಜನೆ ಸಂಭ್ರಮ ಸೂತಕದ ವಾತಾವರಣ ಸೃಷ್ಟಿಸಿದೆ.


Spread the love
Share:

administrator

Leave a Reply

Your email address will not be published. Required fields are marked *