ಉಕ್ರೇನ್-ರಷ್ಯಾ ಯುದ್ಧದಿಂದ ಅಮೆರಿಕಕ್ಕೆ ಹೆಚ್ಚು ಲಾಭ, ಭಾರತ-ಚೀನಾ ಅಲ್ಲʼ

ನವದೆಹಲಿ: ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ (Russia Ukraine war) ಬೇರೆ ಹಲವು ದೇಶಗಳು ಲಾಭ ಮಾಡಿಕೊಳ್ಳುತ್ತಿರುವುದು ಹೌದು. ಭಾರತ ಮತ್ತು ಚೀನಾ ದೇಶಗಳಿಗೆ ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುತ್ತಿದೆ. ಇದೇ ವಿಚಾರಕ್ಕೆ ಅಮೆರಿಕದವರು ಭಾರತದ ಬಗ್ಗೆ ತಗಾದೆ ಎತ್ತುತ್ತಾ ಟ್ಯಾರಿಫ್ ಮೇಲೆ ಟ್ಯಾರಿ ಹೇರಿಕೆ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ, ರಷ್ಯನ್ ತೈಲ ಖರೀದಿಸಿ ಭಾರತ ಮಾಡುತ್ತಿರುವ ಲಾಭ ಅಲ್ಪ. ಇದಕ್ಕೆ ಹೋಲಿಸಿದರೆ ಅಮೆರಿಕವೇ ಅತಿಹೆಚ್ಚು ಲಾಭ ಮಾಡಿಕೊಳ್ಳುತ್ತಿದೆ. ಯೂರೇಷಿಯನ್ ಟೈಮ್ಸ್ ವೆಬ್ಸೈಟ್ನಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದೆ.

ಭಾರತಕ್ಕೆ 17 ಬಿಲಿಯನ್ ಡಾಲರ್ ಹಣ ಉಳಿತಾಯ
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿತು. ಅದಾದ ಬಳಿಕ ಅಮೆರಿಕವು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿತು. ರಷ್ಯಾಗೆ ಆದಾಯ ಮೂಲ ಕ್ಷೀಣಗೊಂಡಿತು. ತನ್ನಲ್ಲಿದ್ದ ತೈಲವನ್ನು ಕಡಿಮೆ ಬೆಲೆಗೆ ಮಾರಾಟಕ್ಕಿಟ್ಟಿತು. ಕಳೆದ ಮೂರು ವರ್ಷದಲ್ಲಿ ರಷ್ಯಾದಿಂದ ರಫ್ತಾದ ತೈಲದಲ್ಲಿ ಚೀನಾಗೆ ಶೇ. 47, ಭಾರತಕ್ಕೆ ಶೇ. 38ರಷ್ಟು ಹೋಗಿದೆ. ಭಾರತವು ಈ ಮೂರು ವರ್ಷದಲ್ಲಿ ರಷ್ಯನ್ ತೈಲ ಖರೀದಿಯಿಂದಾಗಿ ತೈಲ ಆಮದಿನಲ್ಲಿ 17 ಬಿಲಿಯನ್ ಡಾಲರ್ ಹಣ ಉಳಿಸಿರಬಹುದು ಎನ್ನುವ ಅಂದಾಜಿದೆ.
ಅಮೆರಿಕದ ಡಿಫೆನ್ಸ್ ಕಂಪನಿಗಳಿಗೆ ಭರ್ಜರಿ ಆದಾಯ
ರಷ್ಯಾ ಉಕ್ರೇನ್ ಯುದ್ಧ ಶುರುವಾದಾಗಿನಿಂದ ಅಮೆರಿಕದ ಡಿಫೆನ್ಸ್ ಕಂಪನಿಗಳಿಗೆ ಸಖತ್ ಬ್ಯುಸಿನೆಸ್ ಆಗುತ್ತಿದೆ. ಭರಪೂರ ಲಾಭ ಮಾಡುತ್ತಿವೆ ಎನ್ನಲಾಗಿದೆ. ಅಮೆರಿಕದ ವಿದೇಶೀ ಮಿಲಿಟರಿ ಮಾರಾಟ ವ್ಯವಸ್ಥೆ ಅಡಿ ರಫ್ತಾದ ಶಸ್ತ್ರಾಸ್ತ್ರಗಳ ಮೌಲ್ಯ ನಿಜಕ್ಕೂ ಅಚ್ಚರಿಗೊಳಿಸುತ್ತದೆ.
ಈ ಎಫ್ಎಂಎಸ್ ವ್ಯವಸ್ಥೆಯಲ್ಲಿ 2022ರಲ್ಲಿ 50.9 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡಿದ್ದವು. 2024ರಲ್ಲಿ ಇದು 117.9 ಬಿಲಿಯನ್ ಡಾಲರ್ಗೆ ಏರಿದೆ. ಎರಡಕ್ಕೂ ಹೆಚ್ಚು ಪಟ್ಟುಗಳಷ್ಟು ರಫ್ತು ಏರಿದೆ.
ಇನ್ನು, ನೇರ ಕಮರ್ಷಿಯಲ್ ಮಾರಾಟ 2023ರಲ್ಲಿ 157.5 ಬಿಲಿಯನ್ ಡಾಲರ್ ಇದ್ದದ್ದು 2024ರಲ್ಲಿ 200.8 ಬಿಲಿಯನ್ ಡಾಲರ್ ಮುಟ್ಟಿದೆ. ಒಂದು ವರ್ಷದಲ್ಲಿ ಶೇ. 27.6ರಷ್ಟು ಹೆಚ್ಚಳವಾಗಿದೆ.
ಈ ಅವಧಿಯಲ್ಲಿ ಅಮೆರಿಕದಿಂದ ರಫ್ತಾದ ಹೆಚ್ಚಿನ ಶಸ್ತ್ರಾಸ್ತ್ರಗಳು ಉಕ್ರೇನ್ ಹಾಗೂ ಯೂರೋಪಿಯನ್ ಯೂನಿಯನ್ಗೆ ಹೋಗಿವೆ
ಯೂರೋಪ್ಗೆ ರಷ್ಯಾದ ಭಯ
ಅಮೆರಿಕ ದೇಶದಿಂದ ಉಕ್ರೇನ್ ಮತ್ತು ಐರೋಪ್ಯ ದೇಶಗಳು ಹಣ ಕೊಟ್ಟು ಶಸ್ತ್ರಾಸ್ತ್ರ ಖರೀದಿಸುತ್ತಿವೆ. ಯೂರೋಪ್ಗೆ ರಷ್ಯಾದ ಭಯ ಇರುವುದರಿಂದ ಇಷ್ಟ ಬಂದಷ್ಟು ಶಸ್ತ್ರಾಸ್ತ್ರ ಖರೀದಿ ಮಾಡುತ್ತಿದೆ. ಅಮೆರಿಕದ ಟಾಪ್-5 ಡಿಫೆನ್ಸ್ ಕಂಪನಿಗಳಾದ ಲಾಕ್ಹೀಡ್ ಮಾರ್ಟಿನ್, ಆರ್ಟಿಎಕ್ಸ್, ಜನರಲ್ ಡೈನಾಮಿಕ್ಸ್, ನಾರ್ಥ್ರಾಪ್ ಗ್ರುಮನ್ ಮತ್ತು ಬೋಯಿಂಗ್ ಸಾಕಷ್ಟು ಬ್ಯುಸಿನೆಸ್ ಮಾಡಿವೆ. ಇನ್ನೂ ಹಲವು ಹೊಸ ಕಂಪನಿಗಳಿಗೂ ಒಳ್ಳೆಯ ಬ್ಯುಸಿನೆಸ್ ಸಿಕ್ಕಿದೆ.
ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ವರದಿಯೊಂದರ ಪ್ರಕಾರ, 2023ರಲ್ಲಿ ಅಮೆರಿಕದ ಖಾಸಗಿ ಡಿಫೆನ್ಸ್ ಗುತ್ತಿಗೆ ಕಂಪನಿಗಳು ವಿದೇಶಗಳಿಗೆ ಮಾರಾಟ ಮಾಡಿದ ಉಪಕರಣಗಳ ಮೌಲ್ಯ 238.4 ಬಿಲಿಯನ್ ಡಾಲರ್ ಇತ್ತು. 2024ರಲ್ಲಿ ಇದು 318.7 ಬಿಲಿಯನ್ ಡಾಲರ್ಗೆ ಏರಿದೆ. ರಷ್ಯಾ ಉಕ್ರೇನ್ ಯುದ್ಧದಿಂದ ಯಾವ ದೇಶ ಅತಿಹೆಚ್ಚು ಲಾಭ ಮಾಡಿದೆ ಎಂಬುದು ಈ ಮೇಲಿನ ಅಂಕಿ ಅಂಶ ಸ್ಪಷ್ಟವಾಗಿ ತಿಳಿಸುತ್ತದೆ.