ಪುತ್ತೂರಿನ ನಾಲ್ಕೂವರೆ ವರ್ಷದ ಬಾಲಕನಿಗೆ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಗೌರವ

ಪುತ್ತೂರು: ತನ್ನ ಅಸಾಧಾರಣ ಪ್ರತಿಭೆಯಿಂದಾಗಿ ಪುತ್ತೂರು ತಾಲೂಕಿನ ಕೆಮ್ಮಿಂಜೆ ಎಂಬಲ್ಲಿನ ನಾಲ್ಕೂವರೆ ವರ್ಷದ ಪುಟ್ಟ ಬಾಲಕನೋರ್ವ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ.ವಿವಿಧ ವಿಷಯಗಳನ್ನು ಅತೀ ವೇಗವಾಗಿ ಗುರುತಿಸಿ ಪಠಿಸುವ ಅಪೂರ್ವ ಸಾಮರ್ಥ್ಯವನ್ನು ಹೊಂದಿರುವ ಅಪ್ರಮೇಯ ಪಿ.ಎನ್. ಎಂಬ ಬಾಲಕ ತನ್ನ ಈ ಜ್ಞಾನದ ಕಾರಣಕ್ಕಾಗಿ ದಾಖಲೆ ನಿರ್ಮಿಸಿದ್ದಾನೆ. ಭಗವದ್ಗೀತೆಯ ಮೊದಲ ಅಧ್ಯಾಯದ ಕೆಲವು ಶ್ಲೋಕಗಳು, ಶ್ರೀರಾಮನ ವಂಶವೃಕ್ಷ, ೬೦ ಸಂವತ್ಸರಗಳು, ಮಾಸಗಳು, ನಕ್ಷತ್ರಗಳು, ಪ್ರಾಣಿಗಳು, ಪಕ್ಷಿಗಳು, ಬಣ್ಣಗಳು, ದೇಹದ ಭಾಗಗಳು, ತಿಂಗಳುಗಳು, ರಾಶಿಗಳು, ರಾಜ್ಯಗಳು ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಕೇವಲ ೧೮ ನಿಮಿಷಗಳಲ್ಲಿ ಪೂರೈಸಿದ್ದಕ್ಕಾಗಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಅಪ್ರಮೇಯನನ್ನು ಪ್ರಶಸ್ತಿ, ಪದಕ ಮತ್ತು ಶ್ಲಾಘನಾ ಪ್ರಮಾಣಪತ್ರದೊಂದಿಗೆ ಸನ್ಮಾನಿಸಿದೆ.

ಈ ಹಿಂದೆಯೇ ಅಪ್ರಮೇಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾನೆ. ಪ್ರಸ್ತುತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಎಲ್ಕೆಜಿ ವಿದ್ಯಾರ್ಥಿಯಾಗಿರುವ ಅಪ್ರಮೇಯ, ತನ್ನ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈತ ಕೆಮ್ಮಿಂಜೆ ನಿವಾಸಿಗಳಾದ ಪ್ರವೀಣ್ ನಾಯಕ್ ಮತ್ತು ಅಕ್ಷತಾ ದಂಪತಿಯ ಪುತ್ರ.
