ಬಂಟ್ವಾಳದಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರ: ಧ್ವನಿವರ್ಧಕ ದುರುಪಯೋಗ ಪ್ರಕರಣ ದಾಖಲಿಸಿದ ಪೊಲೀಸರು

ಬಂಟ್ವಾಳ : ಕಟ್ಟಡದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಧಾರ್ಮಿಕ ಕೇಂದ್ರ ನಿರ್ಮಿಸಿ ಧ್ವನಿವರ್ದಕ ಬಳಸಿ ಅಜಾನ್ ಕೂಗುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಧ್ವನಿವರ್ದಕ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಮದ್ರಸ ಕಟ್ಟಡದಲ್ಲಿ ಅನಧಿಕೃತವಾಗಿ ಧಾರ್ಮಿಕ ಕೇಂದ್ರ ನಿರ್ಮಿಸಿದ್ದು, ಯಾವುದೇ ಪರವಾನಿಗೆ ಪಡೆಯದೇ ಧ್ವನಿವರ್ಧಕ ಅಳವಡಿಸಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧ್ವನಿಯಲ್ಲಿ ದಿನಕ್ಕೆ 5 ಬಾರಿಯಂತೆ ಆಜಾನ್ ಕೂಗುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿರುವ ಜನರಿಗೆ ತೊಂದರೆಯಾಗುತ್ತಿದ್ದು, ಈ ಮೂಲಕ ಧ್ವನಿವರ್ಧಕಗಳ ಬಳಕೆಯ ಬಗೆಗಿನ ಕಾನೂನನ್ನು ಉಲ್ಲಂಘಿಸಿರುತ್ತಾರೆ ಎಂಬುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಬಂದ ದೂರನ್ನು ಸ್ವೀಕರಿಸಿ, ನ್ಯಾಯಾಲಯದ ಅನುಮತಿ ಪಡೆದು ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 133/2025 ಕಲಂ:37,92 (ಐ), 109 ಕೆಪಿ ಆಕ್ಟ್ ಹಾಗೂ 292 ಬಿಎನ್‌ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.
ಆದರೆ ಈ ಬಗ್ಗೆ ಹಿಂದು ಸಂಘಟನೆಗಳ ಒತ್ತಡಕ್ಕೆ ಮಣಿದು ಪೊಲೀಸರು ಕ್ರಮ ಜರುಗಿಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದ ಬಗ್ಗೆ ಎಸ್ಪಿ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ಜುಲೈ 31ರಂದು ಸದ್ರಿ ಕಟ್ಟಡವು ಅಕ್ರಮವಾಗಿ ನಿರ್ಮಿಸಿರುವುದಕ್ಕೆ ಮತ್ತು ಧ್ವನಿವರ್ಧಕದ ದುರುಪಯೋಗಕ್ಕಾಗಿ ಗ್ರಾಮ ಪಂಚಾಯತ್‌ನಿಂದ ನೋಟಿಸ್ ನೀಡಲಾಗಿರುತ್ತದೆ. ಅಕ್ರಮ ಕಟ್ಟಡದಲ್ಲಿ ಧ್ವನಿವರ್ಧಕ ಪರವಾನಗಿಯನ್ನು ರದ್ದುಗೊಳಿಸುವಂತೆ ಗ್ರಾಮ ಪಂಚಾಯತ್‌ನಿಂದ ಪೊಲೀಸರಿಗೆ ಪತ್ರ ನೀಡಲಾಗಿರುತ್ತದೆ.
ಆ.13ರಂದು ಪೊಲೀಸರಿಗೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮತ್ತು ಪರವಾನಗಿ ನೀಡಲಾದ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗಾಗಿ ಧ್ವನಿವರ್ಧಕವನ್ನು ಬಳಸಿದ ಹಿನ್ನೆಲೆಯಲ್ಲಿ ಬಂಟ್ವಾಳ ಉಪಾಧೀಕ್ಷಕರು ಧ್ವನಿವರ್ಧಕ ಬಳಕೆಯ ಪರವಾನಗಿಯನ್ನು ರದ್ದುಗೊಳಿಸಿರುತ್ತಾರೆ. ಇದಕ್ಕೆ ಸಂಬಂಧಿಸಿ ಸೆ.06ರಂದು ಧ್ವನಿವರ್ಧಕದ ಅಕ್ರಮ ಬಳಕೆಗೆ ಸಂಬಂಧಪಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗುತ್ತಿದೆ.
ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ಇಂತಹ ಯಾವುದೇ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡದಂತೆ ಹಾಗೂ ಅಂತಹ ಸುದ್ದಿಗಳಿಗೆ ಮಾನ್ಯತೆ ಕೊಡದಂತೆ ಈ ಮೂಲಕ ವಿನಂತಿಸಲಾಗಿದೆ ಎಂದು ತಿಳಿಸಲಾಗಿದೆ.
