ಪೋಲಿಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿಲ್ಲವೆಂದು ಸ್ವಯಂ ಪ್ರೇರಿತ PIL ದಾಖಲು- ಸುಪ್ರೀಂ

ನವದೆಹಲಿ : ಪೊಲೀಸ್ ಠಾಣೆಗಳಲ್ಲಿ (Police Stations) ಸಿಸಿಟಿವಿ (CCTV) ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ (Suo Motu) ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court) ದಾಖಲಿಸಿಕೊಂಡಿದೆ.
ದೇಶದ ಕಾನೂನು ಸುವ್ಯವಸ್ಥೆ ಹಾಗೂ ರಕ್ಷಣೆ, ಸಂಚಾರ ನಿರ್ವಹಣೆ ಕಾಪಾಡುವ ಹೊಣೆಗಾರಿಕೆಯನ್ನೂ ಪೊಲೀಸರು ಹೊಂದಿದ್ದಾರೆ. ಪ್ರತಿ ನಿತ್ಯ ಹಲವು ಮಂದಿ ತಮ್ಮ ದೂರು ದುಮ್ಮಾನಗಳನ್ನು ಹೊತ್ತು ಪ್ರತಿ ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತುತ್ತಿರುತ್ತಾರೆ. ಆದರೆ, ಅನೇಕ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ನಾಗರಿಕರ ಕೆಲಸಗಳಿಗೆ ಪೂರಕವಾಗಿ ಮೂಲಸೌಕರ್ಯ ಕೊರತೆ ಕಂಡು ಬಂದಿದೆ. ಇದರ ಜೊತೆಗೆ ಅದೆಷ್ಟೋ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದೆ.

ಮಾನವ ಹಕ್ಕುಗಳ ಉಲ್ಲಂಘನೆ ಪರಿಶೀಲನೆಗೆ ಸಂಬಂಧಿಸಿದಂತೆ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ 2018ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
‘ಕಳೆದ ಎಂಟು ತಿಂಗಳಲ್ಲಿ ಪೊಲೀಸ್ ವಶದಲ್ಲಿದ್ದ 11 ಜನರು ಮೃತಪಟ್ಟಿದ್ದಾರೆ. ಈ ಠಾಣೆಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ‘ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕಾರ್ಯನಿರ್ವಹಣೆಯ ಕೊರತೆ’ ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿದೆ.
ಠಾಣೆಯ ಪ್ರವೇಶ ದ್ವಾರ, ಹೊರಗೆ ಹೋಗುವ ಮಾರ್ಗ, ಮುಖ್ಯ ಗೇಟ್, ಲಾಕ್‌ಅಪ್, ಕಾರಿಡಾರ್‌ಗಳು, ಸ್ವಾಗತಕಾರರ ಮೇಜಿನ ಬಳಿ ಸೇರಿದಂತೆ ಇಡೀ ಠಾಣೆಯ ಪ್ರತಿಯೊಂದು ಚಟುವಟಿಕೆಗಳು ಕಾಣುವಂತೆ ಸಿಸಿಟಿವಿ ಅಳವಡಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಜತೆಗೆ ಪ್ರತಿ ಠಾಣೆಗೂ ಇದ್ದು ಕಡ್ಡಾಯ ಎಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಳವಡಿಸುವ ಕ್ಯಾಮೆರಾಗಳು ರಾತ್ರಿ ಸಮಯದ ದೃಶ್ಯಗಳೂ ಸ್ಪಷ್ಟವಾಗಿ ದಾಖಲಾಗುವ ಗುಣಮಟ್ಟದ್ದಾಗಿರಬೇಕು. ಜತೆಗೆ ಧ್ವನಿ ಮತ್ತು ವಿಡಿಯೋ ಎರಡೂ ದಾಖಲಾಗುವಂತಿರಬೇಕು. ಕನಿಷ್ಠ ಒಂದು ವರ್ಷದ ದೃಶ್ಯಗಳನ್ನು ದಾಖಲಿಸುವ ಸಾಮರ್ಥ್ಯದ ಸ್ಮೃತಿಕೋಶ ಹೊಂದಿರಬೇಕು ಎಂದೂ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಕರ್ನಾಟಕ ಪೊಲೀಸ್ ಠಾಣೆಗಳ ದುಸ್ಥಿತಿ: ಬೆಂಗಳೂರಿನ ಪೊಲೀಸ್ ಠಾಣೆಗಳ ಪೈಕಿ 34 ಠಾಣೆಗಳಿಗೆ ಸ್ವಂತ ಕಟ್ಟಡಗಳಿಲ್ಲ. 10 ಸಂಚಾರ ಠಾಣೆಗಳು ಕಾನೂನು ಸುವ್ಯವಸ್ಥೆ ಠಾಣೆಗಳಲ್ಲಿಯೇ ಸ್ವಲ್ಪ ಜಾಗ ಪಡೆದಿವೆ. ಉಳಿದ 20ಕ್ಕೂ ಅಧಿಕ ಠಾಣೆಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಕೆಲ ಠಾಣೆಗಳು ಶೀಟಿನ ಹೊದಿಕೆ ಹೊದ್ದುಕೊಂಡಿರುವ ಶೆಡ್‌ಗಳಲ್ಲಿ ಕಾರ್ಯಾಚರಿಸುತ್ತಿವೆ.
ಹಲವು ಠಾಣೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಸುಣ್ಣ, ಬಣ್ಣ ಕಾಣದೆ ಎಷ್ಟೋ ವರ್ಷಗಳೇ ಕಂಡಿವೆ. ಕೆಲ ಠಾಣೆಗಳು ಆಗಲೋ ಈಗಲೋ ಕುಸಿದು ಬೀಳುವ ಹಾಗೆ ಕಂಡು ಬರುತ್ತಿವೆ. ಮಳೆ ಬಂದರೆ ಚಾವಣಿಯಲ್ಲಿಸೋರಿಕೆ ಸಾಮಾನ್ಯವಾಗಿದೆ. ಕೆಲ ಠಾಣೆಗಳಲ್ಲಿ ಪೊಲೀಸ್ ಕಡತಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿಗಳಿಲ್ಲ. ಜತೆಗೆ, ಸಿಬ್ಬಂದಿ ಸಮವಸ್ತ್ರ ಬದಲಾವಣೆ, ಕೆಲಸದ ಒತ್ತಡದ ನಡುವೆ ಕೆಲಹೊತ್ತು ನೆಮ್ಮದಿಯಿಂದ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿಯೂ ಇಲ್ಲ.
ಪೊಲೀಸ್ ಠಾಣೆಗಳಲ್ಲಿ ಶೌಚಾಲಯಗಳೇ ಇಲ್ಲ: ಕೆಲವು ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ/ ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯದ ವ್ಯವಸ್ಥೆಯಿಲ್ಲ. ಇದರಿಂದ ಠಾಣೆಯ ಮಹಿಳಾ ಸಿಬ್ಬಂದಿ, ಠಾಣೆಗೆ ಆಗಮಿಸುವ ಮಹಿಳೆಯರು ಅಲ್ಲೇ ಹತ್ತಿರದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಆಶ್ರಯಿಸಬೇಕು. ಇಲ್ಲವೇ ಮನೆಗಳಿಗೆ ವಾಪಸ್ ಬರುವತನಕ ನಿಸರ್ಗದ ಕರೆಯನ್ನು ತಡೆದುಕೊಳ್ಳಬೇಕು ಎಂಬ ಸ್ಥಿತಿ ಇದೆ.
