ಗೋಬಿ, ಐಸ್‌ಕ್ರೀಂ ಗಾಗಿ ಸಿನಿಮಾ ರೇಂಜ್ ಗೆ ಕಥೆ ಕಟ್ಟಿದ 5ನೇ ತರಗತಿ ಬಾಲಕ

ಚಾಮರಾಜನಗರ: ತಿಳುವಳಿಕೆ ಬರುವವರೆಗೆ ಮಕ್ಕಳು ಹಠ ಮಾಡುವುದು ಸಾಮಾನ್ಯ. ತಮಗೆ ಏನಾದರೂ ಬೇಕಾದಲ್ಲಿ ಅತ್ತು ಕರೆದು ಕೊನೆಗೆ ಪೋಷಕರಿಂದ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಚಾಲಾಕಿ ಪೋರ ಮಾಡಿರುವ ಕಿತಾಪತಿ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಿ. ಕೇವಲ ಗೋಬಿ ಹಾಗೂ ಐಸ್ ಕ್ರೀಮ್ ತಿನ್ನುವ ಆಸೆಗೆ ಕಿಡ್ನ್ಯಾಪ್ ಕಥೆ ಕಟ್ಟಿದ್ದಾನೆ. ಆದರೆ ವಯಸ್ಸಿಗೂ ಮೀರಿದ ಜಾಣತನದಿಂದ ಕೊನೆಗೆ ತಾನೇ ಲಾಕ್ ಆಗಿದ್ದಾನೆ.

ಗಡಿ ನಾಡು ಚಾಮರಾಜನಗರದ 5ನೇ ತರಗತಿ ವಿದ್ಯಾರ್ಥಿ ಗೋಬಿ ಹಾಗೂ ಐಸ್ ಕ್ರೀಮ್ ತಿನ್ನುವ ಆಸೆಗೆ ಕಿಡ್ನ್ಯಾಪ್ ಕಥೆ ಕಟ್ಟಿದ್ದಾನೆ. ಆತನ ಕಥೆ ಕೇಳಿದ ಪೋಷಕರು ಹಾಗೂ ಪೊಲೀಸರೇ ಒಂದು ಕ್ಷಣ ಪತರುಗುಟ್ಟಿದ್ದರು.
ನಡೆದದ್ದೇನು?
ಈ 5ನೇ ತರಗತಿಯ ವಿದ್ಯಾರ್ಥಿ ಎಂತಹ ಚಾಲಾಕಿ ಅಂದರೆ ಟ್ಯೂಷನ್ಗೆ ಬಂಕ್ ಹಾಕಿ ಗೋಬಿ ತಿನ್ನುತ್ತ ಕುಳಿತಿದ್ದ. ಇದನ್ನು ನೋಡಿದ ಪಕ್ಕದ ಮನೆಯವರು ಬಾಲಕನ ಫೋಟೊ ಕ್ಲಿಕ್ಕಿಸಿದ್ದರು. ಇದನ್ನ ಗಮನಿಸಿದ ಚಾಲಾಕಿ ಪೋರ ಅಪಹರಣ ಕಥೆ ಕಟ್ಟಿದ್ದಾನೆ.
ಪಕ್ಕದ ಮನೆಯವರು ತಕ್ಷಣವೇ ಪೋಷಕರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಬಾಲಕನ ತಂದೆ ದೂರು ನೀಡಿದ್ದಾರೆ. ತಂದೆ ಕಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಖಾಕಿ ಪಡೆ ಬಾಲಕನನ್ನ ಕರೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಕಥೆ, ಚಿತ್ರಕಥೆ ಎಲ್ಲಾ ವಿದ್ಯಾರ್ಥಿಯದ್ದೇ ಎಂದು ತಿಳಿದುಬಂದಿದೆ. ಬಳಿಕ ಬಾಲಕನಿಗೆ ವಾರ್ನ್ ಮಾಡಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
