ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಘೋಷಿಸುವ ಬೇಡಿಕೆ ಸದ್ಯಕ್ಕೆ ತಿರಸ್ಕರಿಸಿದ ಸರ್ಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಘೋಷಿಸುವ ಹಲವು ವರ್ಷಗಳ ಬೇಡಿಕೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ

ಪ್ರತೀ ವರ್ಷ ಸುಮಾರು 30,000 ಮಂದಿ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಮೂಲ ಸೌಕರ್ಯ ಕೂಡ ಮೇಲ್ದರ್ಜೆಗೇರಿದ್ದು, ಸುತ್ತಮುತ್ತಲಿನ ಜಿಲ್ಲೆಗೆ ಹೊಂದಿಕೊಂಡಿರುವಂತೆ ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಘೋಷಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಜಿಲ್ಲಾಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಘೋಷಿಸುವ ಯಾವುದೇ “ಮಾರ್ಗಸೂಚಿ ಇಲ್ಲ’ ಎಂಬ ಮಾನದಂಡದಂತೆ ಈ ಪ್ರಸ್ತಾವವನ್ನು ರಾಜ್ಯ ಸರಕಾರ ಮನ್ನಿಸಿಲ್ಲ. ಜತೆಗೆ ಆಸ್ಪತ್ರೆಗೆ ಈಗಾಗಲೇ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ವಿಭಾಗೀಯ ಮಟ್ಟದ ಆಸ್ಪತ್ರೆ ಘೋಷಿಸುವ ಪ್ರಯೋಜನ ಕಾಣುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
167 ವರ್ಷಗಳ ಇತಿಹಾಸ ಹೊಂದಿರುವ ವೆನ್ಲಾಕ್ ಆಸ್ಪತ್ರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಂಡಿಲ್ಲ. ನೆರೆಯ 8 ಜಿಲ್ಲೆಗಳಲ್ಲದೇ, ನೆರೆಯ ರಾಜ್ಯದ ಕಾಸರಗೋಡಿನಿಂದಲೂ ರೋಗಿಗಳು ಬರುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಇಡೀ ರಾಜ್ಯಕ್ಕೆ ಒಂದು ಮಾದರಿ ಆಸ್ಪತ್ರೆಯಾಗಿ ವೆನ್ಲಾಕ್ ರೂಪುಗೊಂಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಅನೇಕ ಅತ್ಯಾಧುನಿಕ ಚಿಕಿತ್ಸೆಗಳು, ಸೌಲಭ್ಯಗಳು ಇಲ್ಲಿ ಬಡಜನರಿಗೆ ಉಚಿತವಾಗಿ ಸಿಗುತ್ತಿದೆ. ಹೀಗಾಗಿ ಈ ಆಸ್ಪತ್ರೆಗೆ ಪ್ರಾದೇಶಿಕ ಆಸ್ಪತ್ರೆ ಸ್ಥಾನಮಾನ ನೀಡಬೇಕು ಎಂದು ಹಿಂದೆ ಕೆಡಿಪಿ ಸಭೆಯಲ್ಲೂ ಚರ್ಚೆ ನಡೆದಿತ್ತು. ಕರಾವಳಿ ಭಾಗದ ಜನಪ್ರತಿನಿಧಿಗಳೂ ಸರಕಾರದ ಗಮನಕ್ಕೆ ತಂದಿದ್ದನ್ನು ಸ್ಮರಿಸಬಹುದು.
ವಿಧಾನಪರಿಷತ್ ಸದಸ್ಯ ಐವನ್ ಡಿ”ಸೋಜಾ “ಉದಯವಾಣಿ’ಗೆ ಪ್ರತಿ ಕ್ರಿಯಿಸಿ, “ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಪ್ರಾದೇಶಿಕ (ವಿಭಾಗೀಯ)ಆಸ್ಪತ್ರೆಯನ್ನಾಗಿಸಬೇಕೆಂಬ ಬೇಡಿಕೆ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆ ರೀತಿಯ ಮಾರ್ಗಸೂಚಿಯಿಲ್ಲ ಎಂದಿದ್ದು, ಇಲ್ಲದಿದ್ದರೂ, ಅದನ್ನು ಮಾರ್ಪಾಡು ಮಾಡಿ ವೆನ್ಲಾಕ್ ಅನ್ನು ಪ್ರಾದೇಶಿಕ ಆಸ್ಪತ್ರೆಯನ್ನಾಗಿ ಘೋಷಿಸುವಂತೆ ಮರು ಮನವಿ ಮಾಡಲಾಗಿದೆ. ಅದಕ್ಕೆ ಪ್ರಯತ್ನವನ್ನೂ ಮಾಡುತ್ತಿದ್ದು, ಶೀಘ್ರವೇ ಘೋಷಣೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಸಿಬಂದಿ ಕೊರತೆ!
ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಬೇಕು ಎಂಬ ಬೇಡಿಕೆಯೊಡನೆ ಸಿಬಂದಿ ನೇಮಕಕ್ಕೂ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಏಕೆಂದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇದೆ. 618 ಮಂಜೂರು ಹುದ್ದೆಯಲ್ಲಿ 194 ಹುದ್ದೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 424 ಹುದ್ದೆ ಖಾಲಿ ಇದೆ. 195 ಗ್ರೂಪ್ ಡಿ ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಭಾಗೀಯ ಆಸ್ಪತ್ರೆಯಾದರೆ ಲಾಭವೇನು?
ವೆನ್ಲಾಕ್ ಆಸ್ಪತ್ರೆ ವಿಭಾಗೀಯ ಆಸ್ಪತ್ರೆಯಾದರೆ ಘೋಷಣೆಯಾದರೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕೇಂದ್ರ ಆಗುತ್ತದೆ. ಇಲ್ಲಿನ ರೋಗಿಗಳಿಗೆ ಜಿಲ್ಲಾಸ್ಪತ್ರೆ ಹೊರತುಪಡಿಸಿ, ಪ್ರಧಾನ ಆಸ್ಪತ್ರೆಯಾಗಿ ವೆನ್ಲಾಕ್ ಮಾರ್ಪಾಡಾಗುತ್ತದೆ. ಇಲ್ಲಿನ ಆಡಳಿತ ನಿರ್ವಹಣೆಗೆ ಕೆಎಎಸ್ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಇನ್ನಷ್ಟು ತಜ್ಞ ವೈದ್ಯರು, ನರ್ಸ್ಗಳು ಸೇರಿದಂತೆ ಸಿಬಂದಿ ನೇಮಕ ಎರಡು ಪಟ್ಟು ಹೆಚ್ಚಾಗುತ್ತದೆ. ಆಸ್ಪತ್ರೆಯಲ್ಲಿ ಬೆಡ್ಗಳ ವ್ಯವಸ್ಥೆ, ಆಕ್ಸಿಜನ್, ಐಸಿಯು ಸೇರಿದಂತೆ ಮೂಲ ಸೌಕರ್ಯಗಳು ಇನ್ನಷ್ಟು ಏರಿಕೆಯಾಗುತ್ತದೆ.
