ಜಿಎಸ್‌ಟಿ ದರ ಇಳಿಸಿದ ಕೇಂದ್ರ ಸರ್ಕಾರ: ಹಲವು ವಸ್ತುಗಳ ಬೆಲೆ ಇಳಿಕೆ, ಐಷಾರಾಮಿ ವಸ್ತುಗಳ ಬೆಲೆ ಏರಿಕೆ

ನವದೆಹಲಿ : ಮೊದಲ ದಿನದ ಜಿಎಸ್‌ಟಿ (GST) ಕೌನ್ಸಿಲ್ ಸಭೆಯ ಬೆನ್ನೆಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ತೆರಿಗೆ ಕಡಿತದ ಸಿಹಿಸುದ್ದಿ ನೀಡಿದ್ದಾರೆ. ತುಪ್ಪ, ಬೆಣ್ಣೆ, ಜೀವವಿಮೆ , ಪಾದರಕ್ಷೆ, ಜವಳಿಸೇರಿದಂತೆ ಹಲವು ವಸ್ತುಗಳಿಗೆ ಶೇ 5 ರಷ್ಟು ತೆರಿಗೆ ವಿಧಿಸಲಾಗುವುದು.

ಇದೇ ವೇಳೆ ಎಲ್ಲಾ ರೀತಿಯ ಸಿಗರೇಟು, ತಂಬಾಕು, ಗುಟ್ಕಾ ಮುಂತಾದುವಗಳಿಗೆ ಶೇ 40 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೆಪ್ಸಿ, ಕೊಕೊಕೋಲಾ ಮುಂತಾದ ತಂಪು ಪಾನೀಯಗಳೂ ಸಹ ಶೇ 40 ರಷ್ಟು ತೆರಿಗೆಗೆ ಒಳಗಾಗಲಿವೆ.
ಈ ಎಲ್ಲಾ ತೆರಿಗೆ ಕಡಿತವು ಸೆ. 22 ರಿಂದ ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರಲಿವೆ. ತಂಬಾಕು ಉತ್ಪನ್ನ, ಸಿಗರೇಟು ಮುಂತಾದ ವಸ್ತುಗಳು ಮಾತ್ರ ಈ ತೆರಿಗೆ ಅನ್ವಯಗೊಳ್ಳಲು ಕೊಂಚ ಸಮಯ ತೆಗೆದುಕೊಳ್ಳಲಿದೆ ಎಂದು ವಿತ್ತಸಚಿವೆ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ವಹಿವಾಟಿನ ಪ್ರಕಾರ ಈಗಿನ ತೆರಿಗೆ ಕಡಿತವು ಸರ್ಕಾರಕ್ಕೆ 48000 ಲಕ್ಷ ಕೋಟಿ ರೂ. ಹೊರೆಯನ್ನು ತರಲಿದೆ.
ಹಾಲಿನ ಉತ್ಪನ್ನಗಳು, ಜೀವರಕ್ಷಕ ಔಷಧಿಗಳು ಮುಂತಾದವು ತೆರಿಗೆಯಿಂದ ವಿನಾಯತಿ ಪಡೆಯಲಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಚಪಾತಿ, ರೊಟ್ಟಿ, ಭಾರತದಲ್ಲಿ ತಯಾರಾಗುವ ಬ್ರೆಡ್, ಪನೀರ್ ಮುಂತಾದ ವಸ್ತುಗಳಿಗೂ ಇನ್ನು ಮುಂದೆ ಜಿಎಸ್‌ಟಿ ತೆರಿಗೆ ಇರುವುದಿಲ್ಲ .
ಅಡುಗೆ ಮನೆಯ ಪಾತ್ರೋಪಕರಣಗಳು, ಸಣ್ಣ ಮಟ್ಟದ ವಾಹನಗಳ ಜಿಎಸ್‌ಟಿ ಹೊರೆಯನ್ನೂ ಸಹ ಇಳಿಸಿರುವುದು ಮಧ್ಯಮ ವರ್ಗಕ್ಕೆ ಭಾರೀ ಸಂತಸ ತಂದಿದೆ.
ಇಂದು ಎಲ್ಲಾ ರಾಜ್ಯಗಳ ಹಣಕಾಸು ಮಂತ್ರಿಗಳೂ ಸಹ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರೂ ಸಹ ಈ ಜಿಎಸ್‌ಟಿ ಕಡಿತಕ್ಕೆ ತಮ್ಮ ಸಂಪೂರ್ಣ ಸಹಮತ ಸೂಚಿಸಿದ್ದಾರೆ. ಅವರೆಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಾಮಾನ್ಯ ವರ್ಗಕ್ಕೆ ಅನುಕೂಲವಾಗಿರುವ ಎಲ್ಲಾ ವಸ್ತುಗಳ ಬೆಲೆಯನ್ನೂ ಉದಾಹರಣೆಗೆ ಹೇರ್ ಆಯಿಲ್,ಟೂತ್ ಪೇಸ್ಟ್, ಟೂತ್ ಬ್ರಷ್ , ಟೇಬಲ್ ವೇರ್ , ಕಿಚನ್ ವೇರ್, ಸ್ನಾನದ ಸೋಪ್, ಶಾಂಪೂ, ಬೈಸಿಕಲ್, ಗೃಹೋಪಯೋಗಿ ವಸ್ತುಗಳು ಮುಂತಾದವುಗಳು ಜಿಎಸ್‌ಟಿಯನ್ನು ಶೇ 18 ಅಥವಾ ಶೇ 12 ರಿಂದ ಎಲ್ಲವನ್ನೂ ಶೇ 5 ಕ್ಕೆ ಇಳಿಸಲಾಗಿದೆ.
ಐಷಾರಾಮಿ ವಸ್ತುಗಳಿಗೆ ಜಿಎಸ್‌ಟಿಯನ್ನು ಶೇ 28 ರಿಂದ ಶೇ 40 ಕ್ಕೆ ಏರಿಸಲಾಗಿದೆ. ವಿಮಾನ ಯಾನ, ದುಬಾರಿ ಕಾರ್‌ಗಳು, ಹೆಲಿಕ್ಯಾಪ್ಟರ್ ಯಾನ, ದುಬಾರಿ ಬೈಕುಗಳು ಇನ್ನು ಮುಂದೆ ಶೇ 40 ರ ಜಿಎಸ್ ಟಿ ಸ್ಲಾಬ್ ನಲ್ಲಿ ಬರಲಿದೆ.
ಜಿಎಸ್‌ಟಿ ಸರಳೀಕರಣಗೊಳಿಸುವುದರಿಂದ ರಾಜ್ಯಗಳ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ಹಲವು ರಾಜ್ಯಗಳು ತಮ್ಮ ಅಹವಾಲು ತೋಡಿಕೊಂಡಿದ್ದವು .ಒಂದು ವೇಳೆ ಈ ರೀತಿ ಜಿಎಸ್‌ಟಿ ಆದಾಯ ಕಡಿಮೆಯಾದರೆ ಅದನ್ನು ಕೇಂದ್ರ ಸರ್ಕಾರ ಭರಿಸಿಕೊಡಬೇಕೆಂದು ರಾಜ್ಯ ಸರ್ಕಾರಗಳು ಮನವಿ ಮಾಡಿಕೊಂಡಿದ್ದವು.
ಕರ್ನಾಟಕ್ಕೆ 72 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎನ್ನಲಾಗಿದೆ.
ಸಕ್ಕರೆಯ ಪ್ರಮಾಣ ಹೆಚ್ಚಿರುವ ತಂಪು ಪಾನೀಯಗಳ ಜಿಸ್‌ಟಿಯನ್ನು ಹೆಚ್ಚಿಸಿರುವುದು ಜನರ ಆರೋಗ್ಯ ದೃಷ್ಟಿಯಿಂದಲೂ ಸಹ ಉತ್ತಮ ತೀರ್ಮಾನ ಎನ್ನಲಾಗಿದೆ. ಅಲ್ಲದೇ ಇದರಿಂದ ಪೆಪ್ಸಿ, ಕೊಕೊಕೋಲಾ ಗಳಂತಹ ಬಹುರಾಷ್ಟ್ರೀಯ ಕಂಪನಿಗಳಿಗೂ ಹೊಡೆತ ಬೀಳಲಿದೆ.