ದಾವಣಗೆರೆ ಎಸ್ಪಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಎಫ್‌ಐಆರ್ ದಾಖಲು

ದಾವಣಗೆರೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ (sp uma prashanth) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಿಪಿ ಹರೀಶ್ಗೆ ಇದೀಗ ಸಂಕಷ್ಟ ಎದುರಾಗಿದೆ. ಶಾಸಕರ ಮೇಲೆ ಸ್ವತ: ಎಸ್ಪಿ ಉಮಾ ಪ್ರಶಾಂತ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆಕ್ಷೇಪಾರ್ಹ ಹೇಳಿಕೆಗೆ ಶಾಕಸರ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ವಿವಿಧ ಸಂಘಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇಂದು ಬಿಪಿ ಹರೀಶ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಘಟನೆ ಹಿನ್ನೆಲೆ
ಸೆಪ್ಟೆಂಬರ್ 02ರಂದು ದಾವಣಗೆರೆ ನಗರದ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ರನ್ನು ಉದ್ದೇಶಿಸಿ ಮಾತನಾಡುವಾಗ ‘ಶಾಮನೂರು ಮನೆ ಶ್ವಾನದ ತರ ಆಡುತ್ತಾರೆ’ ಎಂದು ಶಾಸಕ ಬಿಪಿ ಹರೀಶ್ ಕೀಳು ಮಟ್ಟದ ಭಾಷೆ ಬಳಸಿದ್ದರು. ಈ ಸಂಬಂಧ ಎಸ್ಪಿ ಉಮಾ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ BNS 2023 (U/s-132,351(2),79) ರೀತ್ಯಾ ಪ್ರಕರಣ ದಾಖಲಾಗಿದೆ.
ಶಾಸಕರ ಪದ ಬಳಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿಗೆ ಕಾರಣವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಸ್ಪಿ ಪರ ನಿಂತಿದೆ. ತಕ್ಷಣಕ್ಕೆ ಶಾಸಕರು ಎಸ್ಪಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಉಮಾ ಪ್ರಶಾಂತ್ ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನ್ಯಾಮತಿ ಪಟ್ಟಣದ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಕಳೆದ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ತಿಳಿಗೊಳಿಸಿದ್ದಾರೆ. ಅಂತಹ ದಕ್ಷ ಅಧಿಕಾರಿಯನ್ನು ನಿಂದನೆ ಮಾಡಿದ್ದು ಸರಿಯಲ್ಲ. ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಮಹಾಸಭೆ ಆಗ್ರಹಿಸಿದೆ.
ಇತ್ತ ದಾವಣಗೆರೆ ಸಂಸದೆ ಹಾಗೂ ಶಾಮನೂರು ಮನೆತನದ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ ಕೂಡ ಶಾಸಕ ಬಿಪಿ ಹರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತಾಡಲ್ಲ. ಅಂತಹ ಹೇಳಿಕೆ ಅವರ ಮನಸ್ಥಿತಿ ಎಂತಹದ್ದು ಅಂತಾ ತೋರಿಸುತ್ತದೆ. ಎಸ್ಎಸ್ ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರು. ಹತ್ತಾರು ವಿಚಾರಗಳ ಬಗ್ಗೆ ಎಸ್ಪಿ, ಡಿಸಿಗಳೊಂದಿಗೆ ಮಾತನಾಡುವುದಿರುತ್ತದೆ. ಇದೇ ಕಾರಣಕ್ಕೆ ಮನೆಗೂ ಬರುತ್ತಾರೆ. ಇದಕ್ಕೆ ಶಾಸಕ ಬಿಪಿ ಹರೀಶ್ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದಿದ್ದಾರೆ.
ಸದ್ಯ ಶಾಸಕರ ಆಕ್ಷೇಪಾರ್ಹ ಹೇಳಿಕೆಗೆ ಎಫ್‌ಐಆರ್ ದಾಖಲಾಗಿದೆ. ಈ ಕಾರಣಕ್ಕೆ ನಿನ್ನೆ ರಾತ್ರಿ ದಾವಣಗೆರೆ ನಗರದ ಕೆಟಿಜೆ ಪೊಲೀಸ್ ಠಾಣೆಯ ಸಿಬ್ಬಂದಿ ದಾವಣಗೆರೆ ನಗರದ ವಿಶ್ವೇಶ್ವಯ್ಯ ಪಾರ್ಕ ಬಳಿ ಇರುವ ಶಾಸಕ ಬಿಪಿ ಹರೀಶ್ ಮನೆಗೆ ಭೇಟಿ ನೀಡಿದ್ದರು. ಶಾಸಕರು ಬೆಂಗಳೂರಿಗೆ ತೆರಳಿದ್ದರು. ಪೊಲೀಸ್ ಠಾಣೆಗ ಬಂದು ವಿಚಾರಣೆ ಹಾಜರಾಗಿ ಎಂದು ಮೌಖಿತವಾಗಿ ಪೊಲೀಸರು ಹರೀಶ್ ಪತ್ನಿ ಹಾಗೂ ಪುತ್ರನಿಗೆ ಹೇಳಿದ್ದಾರೆ.