Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗುರುಗ್ರಾಮ್‌ನಲ್ಲಿ ಜಲಪ್ರಳಯ, 10 ಕಿ.ಮೀ. ಟ್ರಾಫಿಕ್ ಜಾಮ್: ಹರಿಯಾಣ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

Spread the love

ದೆಹಲಿ: ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಗುರುಗ್ರಾಮ ತೀವ್ರ ಜಲಾವೃತಗೊಂಡಿತ್ತು. ಮಿಲೇನಿಯಂ ಸಿಟಿಯಾದ್ಯಂತ ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಉಂಟಾದ ನಂತರ ಹರಿಯಾಣದ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರ ಟೀಕೆಗೆ ಗುರಿಯಾಗಿದೆ.

ಸೋಮವಾರ ಮಧ್ಯಾಹ್ನದಿಂದ ನಿರಂತರ ಮಳೆ ಸುರಿಯಲಾರಂಭಿಸಿದ್ದು ಪರಿಣಾಮ ದೆಹಲಿ-ಗುರಂಗಾವ್ ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ಪರಿಣಾಮ ಹೆಚ್ಚಿನ ವಾಹನಗಳು ಕೆಟ್ಟು ಹೆದ್ದಾರಿಯಲ್ಲೇ ನಿಂತ ಪರಿಣಾಮ ಸುಮಾರು 10 ಕಿಲೋಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.

ಕಚೇರಿಯಿಂದ ಮನೆಗೆ ಹೊರಟಿದ್ದ ಅದೆಷ್ಟೋ ಮಂದಿ ಹೆದ್ದಾರಿಯಲ್ಲೇ ಸಿಲುಕಿಕೊಂಡು ಪರದಾಡುವಂತಾಯಿತು, ರಸ್ತೆ ಮೇಲೆ ಸುಮಾರು 6 ಗಂಟೆಗಳ ಕಾಲ ಸಿಲುಕಿ ಹೈರಾಣರಾದರು.

ನಾಗರಿಕರು ಕುಸಿದ ಒಳಚರಂಡಿ ಮತ್ತು ಕಳಪೆ ಸಂಚಾರ ನಿರ್ವಹಣೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದರ ಜೊತೆಗೆ ವಿರೋಧ ಪಕ್ಷವು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬಿಜೆಪಿ ವಿರುದ್ಧ ಹರಿಹಾಯ್ದಿದೆ. ವಿಫಲ ಆಡಳಿತ” ಮತ್ತು “ಯೋಜಿತವಲ್ಲದ ನಗರೀಕರಣ” ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೆವಾಲಾ ಮುಖ್ಯಮಂತ್ರಿಯನ್ನು ಅಪಹಾಸ್ಯ ಮಾಡುವ ಮೂಲಕ ಈ ಅವ್ಯವಸ್ಥೆಯ ವೀಡಿಯೊ ಹಂಚಿಕೊಂಡಿದ್ದಾರೆ.

“ಎರಡು ಗಂಟೆಗಳ ಮಳೆ = 20 ಕಿ.ಮೀ. ಗುರಗಾಂವ್ ಜಾಮ್! ಮುಖ್ಯಮಂತ್ರಿ ನಯಾಬ್ ಸೈನಿ ಕೇವಲ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಾರೆ, ಆವರು ರಸ್ತೆಯಲ್ಲಿ ಸಂಚರಿಸುವುದಿಲ್ಲ, ಇದು ಗುರಗಾಂವ್‌ ಹೆದ್ದಾರಿಯ ಹೆಲಿಕಾಪ್ಟರ್ ಶಾಟ್ ಆಗಿದೆ. ಮಳೆಗೆ ಸಿದ್ಧತೆ ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಖರ್ಚು ಮಾಡಿದ ಕೋಟ್ಯಂತರ ಸಾರ್ವಜನಿಕ ಹಣದ ಬಗ್ಗೆ ಪ್ರಶ್ನೆಯಾಗಿದೆ. ಇದು ಬಿಜೆಪಿಯ ಮಿಲೇನಿಯಮ್ ಸಿಟಿ ನಗರಾಭಿವೃದ್ಧಿಯ ‘ಟ್ರಿಪಲ್ ಎಂಜಿನ್ ಮಾದರಿ'” ಎಂದು ವ್ಯಂಗ್ಯವಾಡಿದ್ದಾರೆ.

ಅಪರೂಪದಲ್ಲೇ ಅಪರೂಪ: 62 ವರ್ಷಗಳ ಬಳಿಕ ದೆಹಲಿ, ಮುಂಬೈಗೆ ಏಕಕಾಲದಲ್ಲಿ ಪ್ರವೇಶ ಮಾಡಿದ ಮಾನ್ಸೂನ್ ಮಳೆ!
ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಕೂಡ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮೂರು ಗಂಟೆಗಳ ಮಳೆಯಿಂದ ಗುರುಗ್ರಾಮ್ ನಲ್ಲಿ ಮಂಡಿಯುದ್ದ ನೀರು ತುಂಬಿ ತುಂಬಿದೆ. ಜನರು 5-6 ಗಂಟೆಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ. ಇದು ಬಿಜೆಪಿ ಸರ್ಕಾರದ ಅಸಮರ್ಥತೆ ಮತ್ತು ವಿಫಲ ಯೋಜನೆಯ ಪರಿಣಾಮವಾಗಿದೆ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ “ಮಿಲೇನಿಯಮ್ ಸಿಟಿ ಗುರುಗ್ರಾಮ್. ಡಬಲ್ ವೈಫಲ್ಯದ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಡಬಲ್ ಎಂಜಿನ್ ಸರ್ಕಾರ್” ಎಂಬ ಕಾಮೆಂಟ್‌ ಮಾಡಿದ್ದಾರೆ. ಆದರೆ ಬಿಜೆಪಿ ಇದನ್ನು ದಾಖಲೆಯ ಮಳೆ, ಇದು ನೈಸರ್ಗಿಕ ವಿಕೋಪ ಎಂದು ಕರೆದಿದೆ. “ಮಳೆಯಿಂದಾಗಿ ಸಂಭವಿಸಿದ ಯಾವುದೇ ದುರದೃಷ್ಟಕರ ಘಟನೆಗೆ ನಾವು ವಿಷಾದಿಸುತ್ತೇವೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಯಾಬ್ ಸೈನಿ ಸರ್ಕಾರವು ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದಿದೆ.

ಭಾರೀ ಮಳೆಯಾದಾಗಲೆಲ್ಲಾ ಭಾರತದ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಒಂದಾದ ನಗರದಲ್ಲಿ ನಾಗರಿಕ ಮೂಲಸೌಕರ್ಯವು ಏಕೆ ಕುಸಿಯುತ್ತದೆ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದ್ದು ಮಳೆಯ ಪ್ರಮಾಣ ಕಡಿಮೆಯಾದ ಬಳಿಕ ಶಾಲೆಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದೆ. ಸೋಮವಾರ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವ ಮಾಹಿತಿ ತಿಳಿದ ಹೆಚ್ಚಿನವರು ಮನೆಗೆ ತೆರಳುವ ಬದಲು ಕಚೇರಿಯಲ್ಲೇ ಉಳಿದುಕೊಂಡಿರುವುದೂ ಕಂಡುಬಂದಿದೆ. ಹೆಚ್ಚಿನ ವಾಹನ ಸವಾರರು ಹೆದ್ದಾರಿಯಲ್ಲೇ ಸಿಲುಕಿಕೊಂಡಿದ್ದು ಪರದಾಡುವಂತಾಗಿದೆ.


Spread the love
Share:

administrator

Leave a Reply

Your email address will not be published. Required fields are marked *