ಭಾರತದ ‘ಸಮುದ್ರಯಾನ’ ಯೋಜನೆಗೆ ಪೂರ್ವಭಾವಿಯಾಗಿ ಇಬ್ಬರು ಭಾರತೀಯ ಜಲಯಾತ್ರಿಗಳಿಂದ ಹೊಸ ದಾಖಲೆ!

ನವದೆಹಲಿ: ಭಾರತದ ಗಗನಯಾನ ಯೋಜನೆಗೆ ಪೂರ್ವಭಾವಿಯಾಗಿ ಶುಭಾಂಶು ಶುಕ್ಲ ಗಗನಯಾತ್ರೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿ ಬಂದು ಹೊಸ ಇತಿಹಾಸ ಸೃಷ್ಟಿಸಿದ್ದರು. ಅದೇ ರೀತಿ ಈಗ ಭಾರತದ ಸಮುದ್ರಯಾನ ಯೋಜನೆಗೆ (Samudrayaan) ಪೂರ್ವಭಾವಿಯಾಗಿ ಇಬ್ಬರು ಭಾರತೀಯ ಜಲಯಾತ್ರಿಗಳು (Aquanauts) 2-3 ವಾರಗಳ ಹಿಂದೆ ಆಟ್ಲಾಂಟಿಕ್ ಸಾಗರೊಳಗೆ ಜಿಗಿದಿದ್ದಾರೆ.

ಫ್ರಾನ್ಸ್ ದೇಶದ ನಾಟೈಲ್ (Nautile) ಎನ್ನುವ ಸಬ್ಮರ್ಸಿಬಲ್ ನೌಕೆಯಲ್ಲಿ (Submersible) ಆಗಸ್ಟ್ 4 ಮತ್ತು 5ರಂದು ಜತೀಂದರ್ ಪಾಲ್ ಸಿಂಗ್ ಮತ್ತು ಆರ್ ರಮೇಶ್ ಅವರು 4,000-5,000 ಮೀಟರ್ ಸಮುದ್ರದಾಳಕ್ಕೆ ಹೋಗಿ ಬಂದಿದ್ದಾರೆ. ಇದು ಭಾರತಕ್ಕೆ ಬಹಳ ಮಹತ್ವದ್ದಾಗಿರುವ ಬೆಳವಣಿಗೆ. ಶುಭಾಂಶು ಶುಕ್ಲ ಗಗನಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬಂದಷ್ಟೇ ಮಹತ್ವದ್ದು.
ಭಾರತೀಯರು ಈ ಹಿಂದೆ ಸಾಕಷ್ಟು ಬಾರಿ ಸಬ್ಮರೈನ್ ಡೈವ್ಗಳನ್ನು ಮಾಡಿರುವುದುಂಟು. ಆದರೆ ಅವೆಲ್ಲವೂ 500 ಮೀಟರ್ಗಿಂತ ಕಡಿಮೆ ಆಳಕ್ಕೆ ಹೋಗಿದ್ದೇ ಹೆಚ್ಚು. ಜತೀಂದರ್ ಅವರು ಒಮ್ಮೆ 670 ಮೀಟರ್ ಆಳಕ್ಕೆ ಹೋಗಿ ಬಂದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಈಗ ಜತೀಂದರ್ ಪಾಲ್ ಸಿಂಗ್ ಅವರೇ ಮತ್ತೆ ಹೊಸ ದಾಖಲೆ ಮಾಡಿದ್ದಾರೆ. 5,002 ಮೀಟರ್ ಆಳಕ್ಕೆ ಹೋಗಿ ಬಂದಿದ್ದಾರೆ.
ಆರ್ ರಮೇಶ್ ಅವರು 4,025 ಮೀಟರ್ ಅಳದವರೆಗೂ ಹೋಗಿ ಬಂದಿದ್ದಾರೆ. ಭಾರತೀಯರು ಇಷ್ಟು ಆಳಕ್ಕೆ ಸಬ್ಮರೈನ್ ಡೈವ್ ಮಾಡಿರುವುದು ಇದೇ ಮೊದಲು. ವಿಶ್ವದಲ್ಲಿ ಭಾರತವೂ ಸೇರಿದಂತೆ ಆರು ದೇಶಗಳ ವ್ಯಕ್ತಿಗಳು ಮಾತ್ರವೇ ಈ ಆಳಕ್ಕೆ ಹೋಗಿ ಬಂದಿರುವುದು ಎಂದು ಹೇಳಲಾಗುತ್ತಿದೆ
2027ಕ್ಕೆ ಸಿದ್ಧವಾಗಲಿದೆ ಭಾರತದ್ದೇ ಸ್ವಂತ ನೌಕೆ
ಭಾರತದ ಜತೀಂದರ್ ಮತ್ತು ರಮೇಶ್ ಅವರು ಫ್ರಾನ್ಸ್ ದೇಶದ ನಾಟೈಲ್ ನೌಕೆಯಲ್ಲಿ ಸಮುದ್ರದ ಆಳಕ್ಕೆ ಹೋಗಿ ಬಂದಿದ್ದರು. ಆದರೆ, ಭಾರತವೇ ಸ್ವಂತವಾಗಿ ಮತ್ಸ್ಯ ಎನ್ನುವ ನೌಕೆಯನ್ನು ನಿರ್ಮಿಸುತ್ತಿದೆ. ಇದು 6,000 ಮೀಟರ್ ಆಳಕ್ಕೆ ಹೋಗಿ ಬರುವ ಸಾಮರ್ಥ್ಯ ಹೊಂದಿರಲಿದೆ. 2027ಕ್ಕೆ ಈ ನೌಕೆಯು ಆಳ ಸಮುದ್ರಕ್ಕೆ ಜಲಯಾತ್ರಿಗಳನ್ನು ಕರೆದೊಯ್ಯಲಿದೆ.
ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್ಐಒಟಿ) ಸಬ್ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇಸ್ರೋದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಸಂಸ್ಥೆಯು ಕ್ರ್ಯೂ ಕ್ಯಾಪ್ಸೂಲ್ ವಿನ್ಯಾಸ ಮತ್ತು ತಯಾರಿಕೆ ಮಾಡುತ್ತಿದೆ.
ಆರು ದೇಶಗಳ ಸಾಲಿಗೆ ಸೇರಲಿರುವ ಭಾರತ
ಈಗ ಸದ್ಯಕ್ಕೆ ಐದು ದೇಶಗಳು ಮಾತ್ರವೇ ಆಳ ಸಮುದ್ರಕ್ಕೆ ಹೋಗಬಲ್ಲ ಸಬ್ಮರ್ಸಿಬಲ್ ನೌಕೆಗಳನ್ನು ತಯಾರಿಸಿರುವುದು. ಅಮೆರಿಕ, ಜಪಾನ್, ಫ್ರಾನ್ಸ್, ರಷ್ಯಾ ಮತ್ತು ಚೀನಾ ದೇಶಗಳು ಈ ಮೊದಲು ಜಲಾಂತರ್ಗಾಮಿ ನೌಕೆಗಳನ್ನು ಯಶಸ್ವಿಯಾಗಿ ಕಳುಹಿಸಿವೆ. 2027ರಲ್ಲಿ ಭಾರತದ ಸಮುದ್ರಯಾನ ಯಶಸ್ವಿಯಾದರೆ ಈ ಗುಂಪಿಗೆ ಆರನೇ ದೇಶ ಸೇರ್ಪಡೆಯಾದಂತಾಗುತ್ತದೆ.
ಸದ್ಯ ಚೀನಾದ ನೌಕೆಗಳು 10,000 ಮೀಟರ್ ಆಳಕ್ಕೆ ಜಲಯಾತ್ರಿಗಳನ್ನು ಕರೆದುಕೊಂಡು ಹೋಗಿ ಬಂದಿವೆ. ಇಷ್ಟು ಆಳಕ್ಕೆ ಬೇರಾವ ದೇಶಕ್ಕೂ ಹೋಗಿ ಬರಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಚೀನಾ ಮುಂಚೂಣಿಯಲ್ಲಿದೆ.