ಜಗತ್ತಿನ ಎರಡನೇ ಅತಿದೊಡ್ಡ OTT ವೇದಿಕೆ JioCinema-Disney+ Hotstar: ಆಕಾಶ್ ಅಂಬಾನಿ ಘೋಷಣೆ

ಜಗತ್ತು ಚಿತ್ರಮಂದಿರ ಮತ್ತು ಟಿವಿಗಳಿಂದ ಒಟಿಟಿಗಳೆಡೆಗೆ ದೊಡ್ಡ ಹೆಜ್ಜೆ ಇಡುತ್ತಿರುವ ಸಮಯದಲ್ಲಿ ರಿಲಯನ್ಸ್ ಹಾಗೂ ವಾಲ್ಟ್ ಡಿಸ್ನಿ ಪಾಲುದಾರಿಕೆಯ ಜಿಯೋ ಹಾಟ್ಸ್ಟಾರ್ ವಿಶ್ವದ ಎರಡನೇ ಅತಿದೊಡ್ಡ ಒಟಿಟಿ ವೇದಿಕೆ ಎನಿಸಿಕೊಂಡಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್ನ ಚೇರ್ಮ್ಯಾನ್ ಆಕಾಶ್ ಅಂಬಾನಿ ಅವರು ರಿಲಯನ್ಸ್ ಜಿಯೋನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಹಂಚಿಕೊಂಡರು.

ಒಟ್ಟಾರೆ ಟಿವಿ ಮಾರುಕಟ್ಟೆಯಲ್ಲಿ 34% ಹೊಂದಿರುವ ಜಿಯೋ ಅದರ ಜೊತೆಗೆ ಮೊಬೈಲ್, ಲ್ಯಾಪ್ಟ್ಯಾಪ್, ಟಿವಿ ಇನ್ನಿತರೆ ಕನೆಕ್ಷನ್ಗಳ ಮೂಲಕ ನೂರಾರು ಕೋಟಿ ಜನರಿಗೆ ಕಂಟೆಂಟ್ ಅನ್ನು ತಲುಪಿಸುತ್ತಿದೆ. ಜಿಯೋದ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾತನಾಡಿರುವ ಆಕಾಶ್ ಅಂಬಾನಿ, ‘ಕಂಟೆಂಟ್, ಸಾಫ್ಟ್ವೇರ್ ಮತ್ತು ಎಐ (ಕೃತಕ ಬುದ್ಧಿಮತ್ತೆ)ಯ ಸಂಗಮವನ್ನು ನಾವು ಜಿಯೋ ಹಾಟ್ಸ್ಟಾರ್ನಲ್ಲಿ ಮಾಡಿದ್ದು, ಮುಂದಿನ ದಿನಗಳಲ್ಲಿ ನಾವು ಒಟಿಟಿಯನ್ನು ಇನ್ನಷ್ಟು ದೇಶಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದೇವೆ’ ಎಂದಿದ್ದಾರೆ.
ಪ್ರಸ್ತುತ ಜಿಯೋ ಹಾಟ್ಸ್ಟಾರ್ ಬಳಿ 3.20 ಲಕ್ಷ ಗಂಟೆಗಳ ಕಾಲ ವೀಕ್ಷಿಸಬಲ್ಲ ಕಂಟೆಂಟ್ ಇದೆ. ಜಿಯೋದ ನಂತರದ ಸ್ಥಾನದಲ್ಲಿರುವ ಎರಡು ಒಟಿಟಿಗಳ ಕಂಟೆಂಟ್ ಅನ್ನು ಒಟ್ಟು ಮಾಡಿದರೂ ಇಷ್ಟು ಬೃಹತ್ ಗಂಟೆಗಳ ಕಂಟೆಂಟ್ ಅವರಲ್ಲಿ ಇಲ್ಲ. ಇದರ ಜೊತೆಗೆ ಪ್ರತಿವರ್ಷವೂ 30 ಸಾವಿರ ಗಂಟೆಗಳಿಗೂ ಹೆಚ್ಚಿನ ಅವಧಿಯ ಕಂಟೆಂಟ್ ಅನ್ನು ಜೋಡಿಸುತ್ತಾ ಸಾಗುತ್ತಿದೆ ಜಿಯೋ ಹಾಟ್ಸ್ಟಾರ್.
ಟಿವಿ, ಲ್ಯಾಪ್ಟಾಪ್, ಮೊಬೈಲ್ಗಳನ್ನು ಸೇರಿಸಿ ಜಿಯೋ ಹಾಟ್ಸ್ಟಾರ್ಗೆ 60 ಕೋಟಿ ಬಳಕೆದಾರರಿದ್ದಾರೆ. ಇವರಲ್ಲಿ 30 ಕೋಟಿ ಬಳಕೆದಾರರು ಹಣ ಕೊಟ್ಟು ಸಬ್ಸ್ಕ್ರೈಬರ್ಗಳಾಗಿ ಕಂಟೆಂಟ್ ನೋಡುವವರಾಗಿದ್ದಾರೆ. ‘ನಾವು ಹಾಟ್ಸ್ಟಾರ್ ಜೊತೆಗೆ ಕೈಜೋಡಿಸಿದ್ದು ಅದ್ಭುತವಾದ ಕ್ಷಣ. ನಾವು ಕಂಟೆಂಟ್ ಜೊತೆಗೆ ತಂತ್ರಜ್ಞಾನದ ನೆರವಿನಿಂದ ಅದ್ಭುತವಾದುದನ್ನು ಸಾಧಿಸಿದ್ದೇವೆ’ ಎಂದಿದ್ದಾರೆ. ಅಂದಹಾಗೆ ಮೊದಲನೇ ಸ್ಥಾನದಲ್ಲಿ ನೆಟ್ಫ್ಲಿಕ್ಸ್ ಇದೆ. ಎರಡನೇ ಸ್ಥಾನದಲ್ಲಿ ಜಿಯೋ ಹಾಟ್ಸ್ಟಾರ್ ಇದೆ. ಮೂರನೇ ಸ್ಥಾನದಲ್ಲಿ ಅಮೆಜಾನ್ ಇದೆ.
ಜಿಯೋ ಹಾಟ್ಸ್ಟಾರ್ ಹಾಲಿವುಡ್ನ ಸಿನಿಮಾಗಳು, ಅನಿಮೇಷನ್ ಸಿನಿಮಾ, ಡಾಕ್ಯುಮೆಂಟರಿಗಳು, ವೆಬ್ ಸರಣಿಗಳ ಜೊತೆಗೆ ಭಾರತದ ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು ಇನ್ನೂ ಕೆಲವು ಭಾಷೆಗಳ ಸಿನಿಮಾ ಹಾಗೂ ವೆಬ್ ಸರಣಿಗಳನ್ನು ಪ್ರದರ್ಶಿಸುತ್ತದೆ. ಇದರ ಜೊತೆಗೆ ಐಪಿಎಲ್ ಸೇರಿದಂತೆ ಕ್ರಿಕೆಟ್ ಹಾಗೂ ಇತರೆ ಕೆಲವು ಕ್ರೀಡೆಗಳನ್ನು ಲೈವ್ ಪ್ರದರ್ಶನ ಮಾಡುತ್ತದೆ. ಕ್ರಿಕೆಟ್ ಪ್ರಸಾರದಿಂದಾಗಿ ಕೋಟ್ಯಂತರ ವೀಕ್ಷಕರು ಜಿಯೋ ಹಾಟ್ಸ್ಟಾರ್ ಅನ್ನು ಸಬ್ಸ್ಕ್ರೈಬ್ ಆಗಿದ್ದಾರೆ.