ಕ್ರಿಕೆಟ್ ಲೋಕದಲ್ಲಿ ಹೊಸ ದಾಖಲೆ: ದುಲೀಪ್ ಟ್ರೋಫಿಯಲ್ಲಿ ಡಬಲ್ ಹ್ಯಾಟ್ರಿಕ್ ಸಾಧಿಸಿದ ಆಕಿಬ್ ನಬಿ

ದುಲೀಪ್ ಟ್ರೋಫಿಯಲ್ಲಿ (Duleep Trophy) ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ 4 ತಂಡಗಳು ಮುಖಾಮುಖಿಯಾಗಿವೆ. ಇದರಲ್ಲಿ ಪೂರ್ವ ವಲಯ ಹಾಗೂ ಉತ್ತರ ವಲಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ವಲಯ ತಂಡ 405 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಪೂರ್ವ ವಲಯ ತಂಡ ಕೇವಲ 230 ರನ್ಗಳಿಗೆ ಆಲೌಟ್ ಆಗುವ ಮೂಲಕ 175 ರನ್ಗಳ ಹಿನ್ನಡೆ ಅನುಭವಿಸಿದೆ. ಪೂರ್ವ ವಲಯ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ (Akib Nabi) ಅವರ ಪಾತ್ರ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಆಕಿಬ್ ಕೇವಲ 28 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇದರಲ್ಲಿ ಅವರು ಸತತ 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿ ಇತಿಹಾಸ ನಿರ್ಮಿಸಿದರು. ಈ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹ್ಯಾಟ್ರಿಕ್ ವಿಕೆಟ್
53 ನೇ ಓವರ್ ಬೌಲಿಂಗ್ ಮಾಡಲು ಬಂದ ಆಕಿಬ್ ನಬಿ, ಈ ಓವರ್ನ ನಾಲ್ಕನೇ ಎಸೆತದಲ್ಲಿ ವಿರಾಟ್ ಸಿಂಗ್ಗೆ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ಮನಿಷಿ ಅವರನ್ನು ಸಹ ಮೊದಲ ಎಸೆತದಲ್ಲೇ ಔಟ್ ಮಾಡಿದರು. ಕೊನೆಯ ಎಸೆತದಲ್ಲಿ ಮುಖ್ತಾರ್ ಹುಸೇನ್ ಅವರನ್ನು ಔಟ್ ಮಾಡಿ ತಮ್ಮ ಮೊದಲ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಮತ್ತೆ 55 ನೇ ಓವರ್ ಬೌಲಿಂಗ್ ಮಾಡಲು ಬಂದ ಆಕಿಬ್ ಮೊದಲ ಎಸೆತದಲ್ಲೇ ಸೂರಜ್ ಸಿಂಧು ಜೈಸ್ವಾಲ್ ಅವರ ವಿಕೆಟ್ ಪಡೆದರು.
ಸತತ 4 ಎಸೆತಗಳಲ್ಲಿ 4 ವಿಕೆಟ್
ಇದು ಅವರ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕನೇ ವಿಕೆಟ್ ಆಗಿತ್ತು. ಈ ಮೂಲಕ ಅವರು ಡಬಲ್ ಹ್ಯಾಟ್ರಿಕ್ ಪಡೆದಸಾಧನೆ ಮಾಡಿದರು. ವಾಸ್ತವವಾಗಿ ಕ್ರಿಕೆಟ್ನಲ್ಲಿ, ಸತತ ಮೂರು ವಿಕೆಟ್ ಪಡೆದರೆ ಹ್ಯಾಟ್ರಿಕ್ ಮತ್ತು ಸತತ ನಾಲ್ಕು ವಿಕೆಟ್ ಪಡೆದರೆ ಡಬಲ್ ಹ್ಯಾಟ್ರಿಕ್ ಎನ್ನಲಾಗುತ್ತದೆ. ನಬಿ ಅವರ ಈ ಮಾರಕ ದಾಳಿಯಿಂದಾಗಿ ಪೂರ್ವ ವಲಯ ತಂಡದ ಕೊನೆಯ 5 ವಿಕೆಟ್ಗಳು ಕೇವಲ 8 ರನ್ಗಳಿಗೆ ಪತನವಾದವು. ಇನ್ನು ಈ ಪಂದ್ಯದಲ್ಲಿ ಆಕಿಬ್ ನಬಿ ಹೊರತುಪಡಿಸಿ, ಹರ್ಷಿತ್ ರಾಣಾ ಎರಡು ವಿಕೆಟ್ ಮತ್ತು ಅರ್ಶ್ದೀಪ್ ಸಿಂಗ್ ಒಂದು ವಿಕೆಟ್ ಪಡೆದರು
ಮೇಲೆ ಹೇಳಿದಂತೆ ದುಲೀಪ್ ಟ್ರೋಫಿಯಲ್ಲಿ ಸತತ ನಾಲ್ಕು ವಿಕೆಟ್ ಪಡೆದ ಮೊದಲ ಆಟಗಾರ ಆಕಿಬ್ ನಬಿ. ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ, ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಸಾಧನೆ ಕೇವಲ ನಾಲ್ಕು ಬಾರಿ ಮಾತ್ರ ಸಂಭವಿಸಿದೆ. ದೆಹಲಿ ಬೌಲರ್ ಶಂಕರ್ ಸೈನಿ 1988 ರಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಇವರ ನಂತರ, 2018 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಮೊಹಮ್ಮದ್ ಮುಧಾಸಿರ್ ಮತ್ತು ಮಧ್ಯಪ್ರದೇಶದ ಕುಲ್ವಂತ್ ಖೇಜ್ರೋಲಿಯಾ ಈ ಸಾಧನೆ ಮಾಡಿದ್ದಾರೆ.