ಬೆಂಗಳೂರಿನಲ್ಲಿ ಪೋಲಿಸ್ ತಮ್ಮನ ದರ್ಪ: ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ ಪೋಲಿಸರಿಗೆ ಹಲ್ಲೆ ಯತ್ನ

ಬೆಂಗಳೂರು : ರಸ್ತೆ ಬದಿಯಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡಿದ್ದಲ್ಲದೇ ಅದನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ (Bengaluru Crime) ನಡೆದಿದೆ. ರಸ್ತೆ ಬದಿಯಲ್ಲಿ ತವಾ ಫಿಶ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿಗೆ ಪೊಲೀಸ್ ಆಗಿರುವ ಆತನ ಅಣ್ಣನೇ ನೆರವು ನೀಡಿರುವ ಆರೋಪ ಕೇಳಿಬಂದಿದೆ.

ಚಾಮರಾಜಪೇಟೆಯ ಜಿ.ಟಿ. ಮಾಲ್ ಎದುರು ಮಂಜುನಾಥ್ ಎಂಬಾತ ಅಪ್ಪು ಫಿಶ್ ತವಾ ಫ್ರೈ ಸೆಂಟರ್ ಎಂಬ ಹೆಸರಿನಲ್ಲಿ ಮಾಂಸಾಹಾರಿ ಖಾದ್ಯ ಮಳಿಗೆಯೊಂದನ್ನು ಬೀದಿ ಬದಿಯಲ್ಲೇ ನಡೆಸುತ್ತಿದ್ದ. ಈತನ ಸೋದರ ಮಧುಸೂದನ್ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಅಂಗಡಿಯಲ್ಲಿ ಮೀನು ಸೇವಿಸಲು ಬಂದವರಿಗೆ ಮದ್ಯ ಸೇವನೆಗೂ ಸಹ ಮಂಜುನಾಥ್ ಅವಕಾಶ ನೀಡಿದ್ದ. ಇಲ್ಲಿ ಬರುತ್ತಿದ್ದ ಗ್ರಾಹಕರು ಕಂಠಪೂರ್ತಿ ಕುಡಿದು ಎಣ್ಣೆ ಏಟಿನಲ್ಲಿ ರಂಪ ಮಾಡುತ್ತಿದ್ದರು. ಇದರಿಂದ ಹಲವು ಬಾರಿ ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಈ ವೇಳೆ ಕೆ ಪಿ ಅಗ್ರಹಾರ ಇನ್ಸ್ಪೆಕ್ಟರ್ ಗೋವಿಂದರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಪೊಲೀಸರು ಭೇಟಿ ನೀಡಿದ ವೇಳೆ ಪೊಲೀಸ್ ತಮ್ಮ ಎಂಬ ಧಿಮಾಕು ಪ್ರದರ್ಶಿಸಿದ ಹೋಟೆಲ್ ಓನರ್ ಮಂಜುನಾಥ್ ಸಿಬ್ಬಂದಿಗಳನ್ನ ಎಳೆದಾಡಿ ಹಲ್ಲೆಗೆ ಯತ್ನ ಮಾಡಿದ್ದ. ನಂತರ ಸ್ಥಳಕ್ಕೆ ಬಂದಿದ್ದ ಮಂಜುನಾಥ್ ಸಹೋದರ ಪೊಲೀಸ್ ಹೆಡ್ ಕಾನ್ಸ್’ಟೇಬಲ್ ಮಧುಸೂದನ್ ತಮ್ಮನಿಗೆ ಸಾಥ್ ನೀಡಿದ್ದ. ಅಲ್ಲದೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ಪೊಲೀಸರಿಗೇ ಬೆದರಿಕೆ ಹಾಕಿದ್ದ. ಇಬ್ಬರನ್ನೂ ಬಡಿದು ಎತ್ತಾಕಿಕೊಂಡ ಹೋದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಧುಸೂದನ್ ನನ್ನು ಪೊಲೀಸ್ ಕೆಲಸದಿಂದ ವಜಾ ಮಾಡಲಾಗಿದ್ದು, ಮಂಜುನಾಥ್ ಮತ್ತು ಮಧುಸೂದನ್ ಇಬ್ಬರ ವಿರುದ್ಧವೂ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತ್ಯೇಕ ಘಟನೆಯಲ್ಲಿ ಶಾಸಕ ಮುನಿರತ್ನ (MLA Munirathna) ಮತ್ತೆ ತಮ್ಮ ನಾಲಿಗೆ ಹರಿಬಿಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಬಿಡಿಸಬಹುದು. ಆದರೆ ಎಂಎಲ್ಎ ಆಗುವ ಹುಚ್ಚು ಹಿಡಿದರೆ ಬಿಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವಿರುದ್ದ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಮಲ್ಲತ್ತಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಮುನಿರತ್ನ ಈ ಹೇಳಿಕೆ ನೀಡಿದ್ದಾರೆ.
ನಾನು ಯಾರನ್ನೂ ದೂರುವುದಿಲ್ಲ. ಇಲ್ಲಿ ಈ ದೇವರು ಹಣೆಯ ಮೇಲೆ ಅದೇನು ಬರೆದಿದ್ದಾನೋ ಅದೇ ನಡೆಯುತ್ತದೆ. ಪೊಲೀಸನವರಿಗೆ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ರಕ್ಷಣೆಗಾಗಿ ನೀವೆಲ್ಲರೂ ಹಗಲಿರುಳು ಶ್ರಮಿಸುತ್ತಿದ್ದೀರಿ. ನನ್ನನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ಏನು ಬೇಕಾದರೂ ಮಾಡಲಿ. ಈ ಭೂಮಿಗೆ ಬಂದ ಮೇಲೆ ನಾವು ಹೋಗಲೇ ಬೇಕು. ಅವರ ಕೈಯಿಂದ ನಾನು ಹೋಗಬೇಕು ಎಂದು ಬರೆದಿದ್ದರೆ ಯಾರು ತಪ್ಪಿಸಲು ಆಗುತ್ತೆ? ಅದೂ ಸಹ ಆಗಿಬಿಡಲಿ ಎಂದು ನುಡಿದಿದ್ದ ಮುನಿರತ್ನ, ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೆ ಬೇಕಾದರೂ ತಪ್ಪಿಸಬಹುದು. ಈ ಎಂಎಲ್ಎ ಹುಚ್ಚು ಹಿಡಿದರೆ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶಾಸಕ ಮುನಿರತ್ನ ಅವರ ನುಡಿಗೆ ಭಾರೀ ವಿರೋಧ ವ್ಯಕ್ತವಾಗಿದೆ.