ವ್ಯಕ್ತಿಯೊಬ್ಬನ ಜೊತೆ ಸಂಬಂಧದ ಕಾರಣಕ್ಕೆ ತಂಗಿಗೆ ಅಣ್ಣನಿಂದ ಅತ್ಯಾಚಾರ

ಗಾಂಧಿನಗರ:ತನ್ನ ತಂಗಿ ವ್ಯಕ್ತಿಯೊಬ್ಬನ ಜೊತೆ ಸಂಬಂಧದಲ್ಲಿರುವುದನ್ನು ತಿಳಿದುಕೊಂಡ ಅಣ್ಣ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿರುವುದು ಗುಜರಾತ್‌ನ ಭಾವನಗರದಲ್ಲಿ ನಡೆದಿದೆ.

ಅತ್ಯಾಚಾರಕ್ಕೊಳಗಾದ 22 ವರ್ಷದ ಯುವತಿ ಕಳೆದ 3 ವರ್ಷಗಳಿಂದ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಆಕೆಯ ಸಹೋದರ ಸಿಟ್ಟಿಗೆದ್ದಿದ್ದ. ಇದೇ ಕಾರಣಕ್ಕೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ.
29 ವರ್ಷದ ಆರೋಪಿಯು ವಿವಾಹಿತನಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಜು.13 ಹಾಗೂ ಆ.22 ರಂದು ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡೂ ದಿನವೂ ಯುವತಿಯ ಅತ್ತಿಗೆ ಮನೆಯಲ್ಲಿ ಇರಲಿಲ್ಲ. ಈ ವೇಳೆ, ಮೊದಲ ಸಲ ಚಾಕು ತೋರಿಸಿ, ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ಎರಡನೇ ಸಲ ಅತ್ಯಾಚಾರ ಎಸಗಿ ತೊಡೆಯ ಮೇಲೆ ಸಿಗರೇಟ್‌ನಿಂದ ಸುಟ್ಟಿದ್ದಾನೆ. ಇದರಿಂದ ಗಾಯದ ಕಲೆಗಳು ಹಾಗೇ ಉಳಿದಿವೆ ಎಂದು ಆರೋಪಿಸಲಾಗಿದೆ.
ಯುವತಿ ರಾಜ್ಯ ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಳು. ಬಳಿಕ ಅಧಿಕಾರಿಗಳು ಭಾವನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅಡಿ ಆರೋಪಿಯನ್ನು ಬಂಧಿಸಲಾಗಿದೆ.
ಯುವತಿ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅತ್ಯಾಚಾರದ ಸಮಯದಲ್ಲಿ ಇಬ್ಬರೂ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
