ತುಮಕೂರು: ಅಶ್ವಿನಿ ಆತ್ಮಹತ್ಯೆ ಪ್ರಕರಣದಲ್ಲಿ ತಿರುವು- ಪೊಲೀಸ್ ತನಿಖೆ ಆರಂಭ

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದ ಅಶ್ವಿನಿ (20) ಸಾವಿನ ಪ್ರಕರಣಕ್ಕೆ ತಿರುವು ಪಡೆದುಕೊಂಡಿದೆ. ಮೃತ ಅಶ್ವಿನಿ ಹೊಟ್ಟೆ ನೋವಿನಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಪ್ರಿಯಕರನ ಕಿರುಕುಳ ತಾಳಲಾರದೆ ಶೇಣಿಗೆ ಶರಣಾಗಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಪೋಷಕರು ಅಶ್ವಿನಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಮೊಬೈಲ್ ಪರಿಶೀಲಿಸಿದ್ದಾರೆ. ಅದರಲ್ಲಿ ಅಶ್ವಿನಿ ಆತ್ಮಹತ್ಯೆಗೂ ಮುನ್ನ ಕುಣಿಕೆ ಜೊತೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಕಂಡಿದೆ.

ಜೊತೆಗೆ, ವಾಟ್ಸಾಪ್ ಚಾಟ್ನಲ್ಲಿ ಅಶ್ವಿನಿ ತನ್ನ ಪ್ರಿಯಕರನೊಂದಿಗೆ ಚಾಟ್ ಮಾಡಿರುವುದು ಕಂಡಿದೆ. ಚಾಟ್ ಮತ್ತು ವಿಡಿಯೋ ಕಾಲ್ ಮುಖಾಂತರ ಅಶ್ವಿನಿಗೆ ಯುವಕ ಕಿರುಕುಳ ನೀಡಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಯುವತಿ ಅಶ್ವಿನಿ ತಮ್ಮದೇ ಊರಿನ ಓರ್ವ ಯುವಕನನ್ನು ಪ್ರೀತಿ ಮಾಡುತ್ತಿದ್ದರು. ಆದರೆ, ಯುವಕನಿಗೆ ಮತ್ತೋರ್ವ ಯುವತಿ ಜೊತೆ ಸಂಬಂಧ ಇದೆ ಶಂಕೆ ಅಶ್ವಿನಿಗೆ ವ್ಯಕ್ತವಾಗಿದೆ. ಈ ವಿಚಾರಕ್ಕೆ ಅಶ್ವಿನಿ, ಆಕೆ ಪ್ರಿಯಕರನ ನಡುವೆ ಗಲಾಟೆ ಆಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ವಾಟ್ಸಾಪ್ ಮೆಸೇಜ್, ಆಡಿಯೋ ಆಧರಿಸಿ ಅಶ್ವಿನಿ ಪೋಷಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಯುವಕ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರಿನ ಸರ್ಕಾರಿ ಪ್ಯಾರಾಮೆಡಿಕಲ್ ಕಾಲೇಜಿನಲಿ ವಿದ್ಯಾಬ್ಯಾಸ ಮುಗಿಸಿದ್ದ ಅಶ್ವಿನಿ ಆಗಸ್ಟ್ 21ರಂದು ತಮ್ಮದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಹೊಟ್ಟೆ ನೋವಿನಿಂದ ಬಳಲಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಷಕರು ಭಾವಿಸಿದ್ದರು. ಆದರೆ ಇದೀಗ, ಅಶ್ವಿನಿ ಮೊಬೈಲ್ ಪರಿಶೀಲಿಸಿದಾಗ ಈ ಸಂಗತಿ ಪೋಷಕರಿಗೆ ಗೊತ್ತಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಚಿಕ್ಕನಾಯಕನಹಳ್ಳಿ ಠಾಣೆ ಪೊಲೀಸರು ನಡೆಸುತ್ತಿದ್ದಾರೆ.