ಗಣೇಶೋತ್ಸವ ಸಂಭ್ರಮ: ಹೈದರಾಬಾದ್ನಲ್ಲಿ ಫ್ಲೈಒವರ್ನಲ್ಲಿ ಸಿಲುಕಿದ ಗಣೇಶ

ಗಣೇಶ ಹಬ್ಬಕ್ಕೆ ಕೇವಲ ಇನ್ನೇನೂ ಎರಡು ದಿನವೂ ಇಲ್ಲ. ಹೀಗಿರುವಾಗ ಎಲ್ಲೆಡೆ ಗಣೇಶನನ್ನು ತಂದು ಕೂರಿಸುವುದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಜನ ಗಣೇಶನ ಪ್ರತಿಮೆ ಮಾಡುವ ಪ್ರದೇಶಕ್ಕೆ ತೆರಳಿ ತಮ್ಮ ಇಷ್ಟದ ಗಣೇಶನನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಅದರಲ್ಲೂ ಮುಂಬೈ ಹಾಗೂ ಹೈದರಾಬಾದ್ನಲ್ಲಿ ಗಣೇಶ ಹಬ್ಬದ ಸಂಭ್ರಮವೇ ಬೇರೆ ಪ್ರತಿ ಗಲ್ಲಿಗಳಲ್ಲೂ ಇಲ್ಲಿ ಗಣೇಶನನ್ನು ಕುರಿಸುತ್ತಾರೆ.

ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಬೆಂಗಳೂರಿನ ಗಣೇಶನ ಹಬ್ಬನ ಕೂರಿಸುವ ಉತ್ಸವ ಕಡಿಮೆಯೇನಲ್ಲ. ಇಲ್ಲಿಯೂ ಈಗಾಗಲೇ ಪುಟ್ಟ ಮಕ್ಕಳು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಕೂರಿಸುವುದಕ್ಕೆ ಹಣ ಸಂಗ್ರಹಿಸುವುದನ್ನು ನೋಡಬಹುದು. ಹೀಗಿರುವಾಗ ಇಲ್ಲೊಂದು ಕಡೆ ಗಣೇಶನನ್ನು ಲಾರಿಯಲ್ಲಿ ಹತ್ತಿಸಿ ಕರೆದೊಯ್ಯುತ್ತಿದ್ದ ವೇಳೆ ಗಣೇಶನ ಮೂರ್ತಿಯ ಎತ್ತರದಿಂದಾಗಿ ಫ್ಲೈಒವರ್ ಕೆಳಗೆಯೇ ಗಣೇಶನ ಪ್ರತಿಮೆ ಸಿಲುಕಿಕೊಂಡು ಹೊರಬಾರಲಾಗದೇ ಸಂಕಷ್ಟಕ್ಕೀಡಾದಂತಹ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಘಟನೆಯಿಂದ ಅಲ್ಲಿ ಭಾರಿ ಟ್ರಾಫಿಕ್ ಜಾಮ್ಗೆ ಕಾರಣವಾಯ್ತು. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೈದರಾಬಾದ್ನ ಪಂಜಗುಟ್ಟ ಫ್ಲೈಒವರ್ ಕೆಳಗೆ ಈ ಘಟನೆ ನಡೆದಿದೆ.
ಗಣೇಶನನ್ನು ಹೊತ್ತೊಯ್ಯುತ್ತಿದ್ದ ಲಾರಿ ಪಂಜಗುಟ್ಟ ಇಂಟರ್ಸೆಕ್ಷನ್ ಬಳಿಯ ಫ್ಲೈಒವರ್ನಲ್ಲಿ ಸಿಲುಕಿಕೊಂಡಿದೆ. ಗಣೇಶನನ್ನು ಸಾಗಿಸುತ್ತಿದ್ದ ಈ ಲಾರಿ ಖೈರತಾಬಾದ್ನಿಂದ ಅಮೀರ್ಪೇಟ್ನತ್ತ ಸಾಗುತ್ತಿದ್ದಾಗ ಫ್ಲೈಒವರ್ ಕೆಳಗೆ ಸಿಲುಕಿದೆ. ಗಣೇಶನ ಪ್ರತಿಮೆಯ ಎತ್ತರದಿಂದಾಗಿ ಗಣೇಶ ಫ್ಲೈಒವರ್ ದಾಟಿ ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಲಾರಿ ರಸ್ತೆ ಮಧ್ಯೆ ಸಿಲುಕಿದ್ದರಿಂದ ಭಾರಿ ಟ್ರಾಫಿಕ್ ಜಾಮ್ಗೆ ಕಾರಣವಾಯ್ತು. ನಂತರ ನಿಧಾನವಾಗಿ ಲಾರಿಯನ್ನು ಅಲ್ಲಿಂದ ಬಿಡಿಸಿ ಬಂಜಾರ ಹಿಲ್ಸ್ನತ್ತ ಕಳುಹಿಸಲಾಯ್ತು.
ಮುಂಬೈನಲ್ಲಿ ಲಾಲ್ಬಾಗ್ಚ ರಾಜನ ಅನಾವರಣ:
ಇತ್ತ ಮುಂಬೈನಲ್ಲಿ ಪ್ರಸಿದ್ಧವಾಗಿರುವ ಲಾಲ್ಬೌಚ ರಾಜ ಗಣೇಶನ ಈ ಬಾರಿಯ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಮುಂಬೈನ ಲಾಲ್ಬೌಚ ಅಥವಾ ಲಾಲ್ಬಾಗ್ಚ ರಾಜ ಎಂದು ಕರೆಯಲ್ಪಡುವ ಈ ಅಪ್ರತಿಮ ಗಣೇಶ ವಿಗ್ರಹವು ಪ್ರತಿವರ್ಷವೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಲೇ ಇದೆ. ನಿನ್ನೆ ಈ ಲಾಲ್ಬಾಗ್ಚ ರಾಜ ಗಣೇಶನ ವಿಗ್ರಹವನ್ನು ಅನಾವರಣಗೊಳಿಸಲಾಗಿದ್ದು, ಇಂದಿನಿಂದ ಸೆಪ್ಟೆಂಬರ್ 2ರವರೆಗೆ 10 ದಿನಗಳ ಕಾಲ ಇಲ್ಲಿ ಗಣೇಶ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾನೆ. ಪೂಜ್ಯ ಲಾಲ್ಬೌಚ ರಾಜ ವಿಗ್ರಹವನ್ನು ಎಂಟು ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಬ್ಳಿ ಕುಟುಂಬವು ನಿರ್ವಹಿಸುತ್ತಿದೆ. 1934 ರಲ್ಲಿ ಪುಟ್ಲಬಾಯಿ ಚಾಲ್ನಲ್ಲಿ ಲಾಲ್ಬೌಚ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಳಿಯಿಂದ ಸ್ಥಾಪಿಸಲ್ಪಟ್ಟ ಈ ಗಣೇಶ ಪೆಂಡಲ್ ಭಾರತದ ಅತ್ಯಂತ ಪ್ರಮುಖ ಗಣೇಶೋತ್ಸವ ಸ್ಥಳಗಳಲ್ಲಿ ಒಂದಾಗಿ ಬೆಳೆದಿದೆ. ವರ್ಷಗಳಲ್ಲಿ ಲಾಲ್ಬೌಚ ರಾಜ ಮುಂಬೈನ ಅತ್ಯಂತ ಪ್ರಸಿದ್ಧ ಗಣಪತಿಯಾಗಿ ಖ್ಯಾತಿ ಗಳಿಸಿದ್ದು, ಈ ಗಣೇಶ ಭಕ್ತರ ಅಭಿಲಾಸೆಗಳನ್ನು ಪೂರೈಸುವ ದೇವರು ಎಂದು ಜನ ನಂಬುತ್ತಾರೆ.
ಭಕ್ತರಿಗೆ, ಲಾಲ್ಬೌಚ ರಾಜನ ದರ್ಶನವು ಕೇವಲ ಆಚರಣೆಯಲ್ಲ, ಬದಲಾಗಿ ಆಧ್ಯಾತ್ಮಿಕ ಅನುಭವವಾಗಿದೆ. ಭಾರತದಾದ್ಯಂತ ಮತ್ತು ವಿದೇಶಗಳಿಂದಲೂ ಜನರು ಈ ವಿಗ್ರಹವನ್ನು ವೀಕ್ಷಿಸಲು ಮತ್ತು ಆರೋಗ್ಯ, ಸಮೃದ್ಧಿ ಮತ್ತು ಶಾಂತಿಗಾಗಿ ಆಶೀರ್ವಾದ ಪಡೆಯಲು ಮುಂಬೈಗೆ ಆಗಮಿಸುತ್ತಾರೆ. ಲಾಲ್ಬೌಚ ರಾಜ 2025 ರ ಮೊದಲ ನೋಟ ಬಹಿರಂಗಗೊಳ್ಳುವುದರೊಂದಿಗೆ, ಹಬ್ಬದ ಉತ್ಸಾಹವು ಈಗಾಗಲೇ ನಗರವನ್ನು ಆವರಿಸಿಕೊಂಡಿದ್ದು, ಭವ್ಯ ಆಚರಣೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಿದೆ.
ಮುಂಬೈನ ಧಾರಾವಿಯ ಗಣೇಶ
ಹಾಗೆಯೇ ಮುಂಬೈನ ಧಾರಾವಿಯಲ್ಲಿ ಕಮಲದ ಮೇಲೆ ಕುಳಿತಿರುವ ವಿಶಿಷ್ಟ ಗಣೇಶ ಮೂರ್ತಿಯನ್ನು ಕೂರಿಸಲಾಗಿದೆ. ಉತ್ಸವಕ್ಕೂ ಮುನ್ನ ಅನಾವರಣಗೊಳಿಸಲಾದ ಅನೇಕ ಆಕರ್ಷಕ ಮೂರ್ತಿಗಳಲ್ಲಿ, ಧಾರಾವಿಯ ಗಣೇಶ ಮೂರ್ತಿಯೂ ಒಂದು. ಈ ಬಾರಿ ಗಣೇಶನನ್ನು ಕಮಲದ ದಳದ ಮಧ್ಯೆ ಕೂರಿಸಿದಂತೆ ನಿರ್ಮಿಸಲಾಗಿದ್ದು, ಇಡೀ ವಿಗ್ರಹವನ್ನು ತಾವರೆಯ ಒಂದೇ ದಂಡಿನ ಮೇಲೆ ನಿಲ್ಲುವಂತೆ ರಚಿಸಲಾಗಿದೆ. ಕೃಷ್ಣಲ್ ಆರ್ಟ್ಸ್ನ ಶಿಲ್ಪಿ ಅರುಣ್ ದತ್ತೆ ಈ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಕಮಲದ ಮೇಲೆ ಧಾರಾವಿ ಚಾ ವಿಘ್ನಹರ್ತ ವಿಗ್ರಹವನ್ನು ನಿರ್ಮಿಸಿದ್ದಾರೆ.