ತರಗತಿಯಲ್ಲೇ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ: ಉತ್ತರಾಖಂಡ್‌ನಲ್ಲಿ ಆಘಾತಕಾರಿ ಘಟನೆ

ಡೆಹ್ರಾಡೂನ್: ಉತ್ತರಾಖಂಡ್ ಉದ್ಧಮ್ ಸಿಂಗ್ ನಗರ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ತರಗತಿಯಲ್ಲಿ ಎಲ್ಲರ ಮುಂದೆ ಕೆನ್ನೆಗೆ ಬಾರಿಸಿದರು ಎಂದು ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಗುಂಡಿಕ್ಕಿದ್ದಾನೆ. ಈ ವಾರದ ಆರಂಭದಲ್ಲಿ ಭೌತಶಾಸ್ತ್ರ(physics)ಪಾಠ ಮಾಡುತ್ತಿದ್ದ ಗಂಗಾದೀಪ್ ಸಿಂಗ್ ಕೊಹ್ಲಿ ಎಂಬ ಶಿಕ್ಷಕರು ತರಗತಿಯಲ್ಲಿ ಬಾಲಕನೋರ್ವನ ಕೆನ್ನೆಗೆ ಬಾರಿಸಿದ್ದರು. ಇದರಿಂದ ತೀವ್ರ ಅಸಮಾಧಾನಕ್ಕೊಳಗಾದ ಆ ಬಾಲಕ ಶಾಲೆಗೆ ತರುವ ಬುತ್ತಿಯಲ್ಲಿ ಗನ್ ಹಿಡಿದುಕೊಂಡು ಬಂದಿದ್ದು, ಶಿಕ್ಷಕ ಗಂಗಾದೀಪ್ ಸಿಂಗ್ ಕೊಹ್ಲಿ ಅವರಿಗೆ ಹಿಂದಿನಿಂದ ಗುಂಡಿಕ್ಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಫಿಸಿಕ್ಸ್ ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ಗುಂಡಿನ ದಾಳಿ
ಈ ಗುಂಡಿನ ದಾಳಿಯಿಂದ ಶಿಕ್ಷಕ ಗಂಗಾದೀಪ್ ಸಿಂಗ್ ಕೊಹ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಂದಿನಿಂದ ಬಂದ ಗುಂಡು ಅವರ ಹಿಂಬದಿ ಕತ್ತಿಗೆ ತಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರೆತೆಗೆಯಲಾಗಿದೆ. ಇವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ ಮಯಾಂಕ್ ಅಗರ್ವಾಲ್ ಅವರು, ಕತ್ತಿನಲ್ಲಿ ಸಿಲುಕಿದ್ದ ಗುಂಡನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಲಂಚ್‌ಬಾಕ್ಸ್‌ನಲ್ಲಿ ಗನ್ ತುಂಬಿಕೊಂಡು ಬಂದಿದ್ದ ವಿದ್ಯಾರ್ಥಿ
ಶಿಕ್ಷಕ ಗಂಗಾದೀಪ್ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದು, ಅವರನ್ನು ಹೆಚ್ಚಿನ ಮೇಲ್ವಿಚಾರಣೆಗಾಗಿ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಹೀಗೆ ಪಾಠ ಮಾಡುವ ಶಿಕ್ಷಕರನ್ನೇ ಹತ್ಯೆ ಮಾಡಲು ಮುಂದಾದ ಯುವಕನನ್ನು ಸಮರ್ಥ್ ಬಜ್ವಾ ಎಂದು ಗುರುತಿಸಲಾಗಿದೆ. ಈತ ಲಂಚ್ ಬಾಕ್ಸ್‌ನಲ್ಲಿ ಪಿಸ್ತೂಲ್ ತುಂಬಿಸಿ ತಂದಿದ್ದ ಈತ ಅದನ್ನು ತರಗತಿ ಕೋಣೆಯವರೆಗೂ ತಂದಿದ್ದ. ಕ್ಲಾಸ್‌ರೂಮ್‌ನಲ್ಲೇ ಲಂಚ್‌ಬಾಕ್ಸ್‌ನಿಂದ ಗನ್ ತೆಗೆದ ಬಾಲಕ ಶಿಕ್ಷಕನ ಮೇಲೆ ಗುಂಡಿಕ್ಕಿದ್ದಾನೆ. ಘಟನೆಯ ಬಳಿಕ ಆರೋಪಿ ಸಮರ್ಥ್ ಓಡಿ ಹೋಗಲು ಯತ್ನಿಸಿದ್ದು, ಕೂಡಲೇ ಇತರ ಶಿಕ್ಷಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉದ್ಧಮ್ ಸಿಂಗ್ ನಗರದ ಗುರು ನಾನಕ್ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109ರ ಅಡಿ ಆರೋಪಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿ ಅಪ್ರಾಪ್ತನಾಗಿರುವುದರಿಂದ ಆತನ ಕೈಗೆ ಗನ್ ಹೇಗೆ ಸಿಕ್ಕಿತ್ತು ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಹಾಗೂ ಕೃತ್ಯಕ್ಕೆ ಬಳಸಿದ್ದ ಗನ್ ಅನ್ನು ಜಪ್ತಿ ಮಾಡಲಾಗಿದೆ.