ರಿಯಲ್ ಹೀರೋ ಮಹೇಶ್ ಬಾಬು: ವರ್ಷಕ್ಕೆ ₹30 ಕೋಟಿ ದೇಣಿಗೆ, 4,500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ

ಹೈದರಾಬಾದ್: ಚಿತ್ರರಂಗದಲ್ಲಿ ಅನೇಕ ಕಲಾವಿದರು ಮನರಂಜನೆ ನೀಡುವುದರ ಜತೆಗೆ ಮಾನವೀಯ ಕಾರ್ಯಗಳನ್ನು ಮಾಡಿ, ರಿಯಲ್ ಲೈಫ್‌ನಲ್ಲೂ ಹೀರೋ ಅನ್ನಿಸಿಕೊಂಡವರು ಇದ್ದಾರೆ.

ಅನೇಕ ನಟ- ನಟಿಯರು ತಮ್ಮದೇ ಒಂದು ಫೌಂಡೇಶನ್ ಕಟ್ಟಿಕೊಂಡು ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ʼರಿಯಲ್ ಲೈಫ್ʼ ಹೀರೋ ಸಾಲಿನಲ್ಲಿ ಟಾಲಿವುಡ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರು ಕೂಡ ಸೇರಿದ್ದಾರೆ.
ಟಾಲಿವುಡ್‌ನಲ್ಲಿ ʼಪ್ರಿನ್ಸ್ʼ ಎಂದು ಕರೆಯಲ್ಪಡುವ ಮಹೇಶ್ ಬಾಬು ವೃತ್ತಿ ಬದುಕಿನಲ್ಲಿ ಸೋಲು – ಗೆಲುವು ಎರಡನ್ನೂ ಸಮಾನವಾಗಿ ಕಂಡಿದ್ದಾರೆ. ಸಿನಿಮಾಗಳಲ್ಲಿ ಮಾಸ್ – ಕ್ಲಾಸ್ ಲುಕ್‌ನಲ್ಲಿ ಮಿಂಚಿರುವ ಮಹೇಶ್ ಬಾಬು ನಿಜ ಜೀವನದಲ್ಲಿ ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದ್ದಾರೆ.
ಮಹೇಶ್ ಬಾಬು ಫೌಂಡೇಶನ್ (Mahesh Babu Foundation) ನಡಿಯಲ್ಲಿ ʼಪ್ರಿನ್ಸ್ʼ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಬಡವರಿಗೆ ವೈದ್ಯಕೀಯ ನೆರವು – ಶಿಕ್ಷಣ ಸೇರಿದಂತೆ ಹಲವು ಕಾರ್ಯಗಳನ್ನು ಮಹೇಶ್ ಬಾಬು ಮಾಡುತ್ತಿದ್ದಾರೆ.
4,500 ಉಚಿತ ಹೃದಯ ಶಸ್ತ್ರಚಿಕಿತ್ಸೆ:
ಮಹೇಶ್ ಬಾಬು ಫೌಂಡೇಶನ್ ಆಂಧ್ರ ಆಸ್ಪತ್ರೆಗಳು ಮತ್ತು ಪ್ಯೂರ್ ಲಿಟಲ್ ಹಾರ್ಟ್ಸ್ ಫೌಂಡೇಶನ್ ಸಹಯೋಗದೊಂದಿಗೆ ಇದುವರೆಗೆ 4,500ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ. ಆ ಮೂಲಕ ಹತ್ತಾರು ಕುಟುಂಬಗಳ ನಗುವಿಗೆ – ನೆಮ್ಮದಿಗೆ ಕಾರಣವಾಗಿದ್ದಾರೆ.
ಪ್ರತಿ ವರ್ಷ 25 -30 ಕೋಟಿ ಸಮಾಜ ಸೇವೆಗೆ ಮೀಸಲು:
ಬಡವರಿಗೆ ಆರ್ಥಿಕ ಸಹಾಯ ಮಾತ್ರವಲ್ಲದೆ, ಮಹೇಶ್ ಬಾಬು ಸಾಮಾಜಿಕ ಕಾರ್ಯಗಳಿಗಾಗಿ ಪ್ರತಿ ವರ್ಷ ಸುಮಾರು 25 ರಿಂದ 30 ಕೋಟಿ ರೂ.ಗಳನ್ನು ದೇಣಿಗೆ ನೀಡುತ್ತಾರೆ. ಆಂಧ್ರಪ್ರದೇಶದ ಬುರ್ರಿಪಾಲಂ ಮತ್ತು ತೆಲಂಗಾಣದ ಸಿದ್ದಾಪುರಂ ಎಂಬ ಎರಡು ಹಳ್ಳಿಗಳನ್ನು ದತ್ತು ಪಡೆದಿದ್ದು, ಆ ಗ್ರಾಮದಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ.
ರೇನ್ಬೋ ಮಕ್ಕಳ ಆಸ್ಪತ್ರೆಯಲ್ಲಿ ಬಡ ಮಕ್ಕಳಿಗೆ ಉಚಿತ ಚಿಕಿತ್ಸೆ ಪಡೆಯಲು ಸಹ ಅವರು ಸಹಾಯ ಮಾಡಿದ್ದಾರೆ.
ಮಹೇಶ್ ಬಾಬು ಸುಮಾರು 350 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಜುಬಿಲಿ ಹಿಲ್ಸ್‌ನಲ್ಲಿ 30 ಕೋಟಿ ರೂಪಾಯಿಗಳ ಐಷಾರಾಮಿ ಮನೆ ಮತ್ತು 7 ಕೋಟಿ ರೂಪಾಯಿಗಳ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಮಹೇಶ್ ಬಾಬು ಸದ್ಯ ವೃತ್ತಿ ಬದುಕಿನ ವಿಶೇಷ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಖ್ಯಾತ ನಿರ್ದೇಶನ ಎಸ್‌ಎಸ್ ರಾಜಮೌಳಿ (SS Rajamouli) ಅವರ ಜತೆ ಮಹೇಶ್ ಬಾಬು ʼSSMB29′ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೂಲಗಳ ಪ್ರಕಾರ, ಇದು 1000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಾಗಿದೆ. ಇದರಲ್ಲಿ ಬಾಲಿವುಡ್ – ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಮಾಲಿವುಡ್ ಪೃಥ್ವಿರಾಜ್ ಸುಕುಮಾರನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.